-ಅವೈಜ್ಞಾನಿಕವಾಗಿ ಒಳಮೀಸಲಾತಿ ವರ್ಗೀಕರಣಕ್ಕೆ ವ್ಯಾಪಕ ವಿರೋಧ । ಗೋರಸೇನಾ ರಾಷ್ಟ್ರೀಯ ಸಂಘಟನೆ ಸಚಿವ ದರ್ಶನಾಪುರಗೆ ಮನವಿ
------ಕನ್ನಡಪ್ರಭ ವಾರ್ತೆ ಶಹಾಪುರ
ಒಳಮೀಸಲಾತಿಯೇ ಅಸಂವಿಧಾನಿಕ ಆಗಿರುವಾಗ ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇ.4.5 ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಅವೈಜ್ಞಾನಿಕ. ಇದನ್ನು ಸಮುದಾಯ ಒಪ್ಪುವುದಿಲ್ಲ. ಸಹೋದರ ಸಮುದಾಯಗಳನ್ನು ಒಡೆಯುವ ಮೂಲಕ ರಾಜಕೀಯ ಮಾಡಲು ಸರ್ಕಾರ ಮುಂದಾಗಿದೆ. ಅದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಗೋರಸೇನಾ ರಾಷ್ಟ್ರೀಯ ಸಂಘಟನೆ ವತಿಯಿಂದ ತಾಲೂಕಿನ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಗೋರಸೇನಾ ಜಿಲ್ಲಾಧ್ಯಕ್ಷ ರಾಮು ರಾಠೋಡ ಅವರು, ಕರ್ನಾಟಕ ರಾಜ್ಯದ ಲಂಬಾಣಿ, ಬಂಜಾರಾ ಸಮುದಾಯಕ್ಕೆ ಮಾರಕವಾಗಿ ಕಾಡುತ್ತಿರುವ ಒಳಮೀಸಲಾತಿ ಮತ್ತು ವರ್ಗೀಕರಣವನ್ನು ಗೋರಸೇನಾ ರಾಷ್ಟ್ರೀಯ ಸಂಘಟನೆ, ರಾಜ್ಯ ಘಟಕ ತೀವ್ರವಾಗಿ ವಿರೋಧಿಸುತ್ತದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಅಸಂವಿಧಾನಾತ್ಮಕ ಮತ್ತು ಅವೈಜ್ಞಾನಿಕವಾಗಿ ವರ್ಗೀಕರಣ ಸರ್ಕಾರ ಮಾಡಕೂಡದು. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಚರ್ಚೆ ಮಾಡದೆ, ಸಮುದಾಯದವರ ಅಭಿಪ್ರಾಯ ಪಡೆಯದೆ ಏಕಾಏಕಿ ವರದಿಯನ್ನು ಶಿಫಾರಸ್ಸು ಮಾಡಿರುವುದು ಸರಿಯಲ್ಲ. ಒಳ ಮೀಸಲಾತಿ ಕುರಿತು ಅ.28 ರಂದು ಸಚಿವ ಸಂಪುಟ ಸಭೆ ವಿರೋಧಿಸಿ, ರಾಜ್ಯದ ಎಲ್ಲ ಲಂಬಾಣಿ, ಕೊರಚ, ಕೊರಮ ಮತ್ತು ಭೋವಿ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಕೂಡದು ಎಂದು ಗೋರಸೇನಾ ಕರ್ನಾಟಕ ರಾಜ್ಯ ಘಟಕ ಈ ಎಚ್ಚರಿಕೆ ಮನವಿ ಸಲ್ಲಿಸುತ್ತಿದೆ ಎಂದರು.ಬಿಜೆಪಿ ಹಠಾವೋ, ತಾಂಡಾ ಬಚಾವೋ ಎಂಬ ಘೋಷಣೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹಠಾವೋ ಎಂಬ ಘೋಷಣೆಗೆ ಬದಲಾಗದಂತೆ ನಿಗಾವಹಿಸಲು ಎಚ್ಚರಿಸುತ್ತಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸೇನಾದ ತಾಲೂಕಾಧ್ಯಕ್ಷ ಗೋಪಾಲ ರಾಠೋಡ ಮಾತನಾಡಿದರು. ಜಿಲ್ಲಾ ಖಜಾಂಚಿ ಶಿವರಾಜ್ ರಾಠೋಡ, ತಾಲೂಕ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ರಾಠೋಡ, ಗೌರವಾಧ್ಯಕ್ಷ ಮೌನೇಶ್ ರಾಠೋಡ, ಅನೀಲ್ ಚವ್ಹಾಣ, ಶಿವು ರಾಠೋಡ, ಶಶಿಕಾಂತ ಚವ್ಹಾಣ, ಶರಣು ಚವ್ಹಾಣ, ಭೋಜರಾಜ್ ರಾಠೋಡ, ಕಿರಣ್ ರಾಠೋಡ, ದೇವರಾಜ್ ರಾಠೋಡ ಇದ್ದರು.------
25ವೈಡಿಆರ್2: ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರವು ಒಳ ಮೀಸಲಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲು ತಯಾರಿ ನಡೆಸಿರುವುದನ್ನು ವಿರೋಧಿಸಿ ಗೋರಸೇನಾ ರಾಷ್ಟ್ರೀಯ ಸಂಘಟನೆಯಿಂದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.