ಕುಂದಗೋಳ:
ಈ ವೇಳೆ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಕಾಯಕವೇ ಕೈಲಾಸ ಎಂಬಂತೆ ಕಾಯಕವನ್ನೇ ನಂಬಿದ, ದೇಶೀಯ ಆಕಳು ಸಾಕುವ ಮೂಲಕ ಉತ್ತೇಜನ ನೀಡಿ, ಅಧ್ಯಾತ್ಮದ ಜತೆಗೆ ಒಕ್ಕಲುತನವನ್ನು ಉತ್ತಮಗೊಳಿಸಿದ್ದು ಶ್ರೀಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು. ಇಂತಹ ಶ್ರೀಗಳ ಮಾತನ್ನು ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ಕೇಳುತ್ತವೆ. ಆದರೆ, ಅಂತಹ ಪೂಜ್ಯರಿಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ದುರ್ದೈವದ ಮತ್ತು ಲಜ್ಜಾಸ್ಪದ ಸಂಗತಿ ಎಂದರು.
ಸರ್ಕಾರವು ಸ್ವಾಮೀಜಿಗಳ ಮಧ್ಯೆ ಕದನ ಏರ್ಪಡಿಸುವಂತಹ ಹೀನಾಯ ಕೆಲಸ ಮಾಡುತ್ತಿದೆ. ಇದು ಯಾವುದೇ ಕಾರಣಕ್ಕೂ ಸರ್ಕಾರದಿಂದ ಆಗಬಾರದು. ಈ ಪ್ರತಿಭಟನೆಯು ಕೇವಲ ಕುಂದಗೋಳದಿಂದ ಬಂದ ಸಾಮಾನ್ಯ ಮನವಿ ಎಂದು ಸರ್ಕಾರ ತಿಳಿದುಕೊಳ್ಳಬಾರದು. ಸ್ವಾಮೀಜಿಗಳಿಗೆ ರಾಜ್ಯಾದ್ಯಂತ ಅಪಾರ ಭಕ್ತರಿದ್ದಾರೆ. ಈ ನೋವಿನ ಪರಿಣಾಮವಾಗಿ ಎಲ್ಲ ಪಕ್ಷಭೇದ, ಜಾತಿ-ಮತ ಎನ್ನದೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ಇದು ಬರೀ ಮನವಿಯಲ್ಲ, ಇಂದೊಂದು ಹೋರಾಟ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಹೇಳಿದರು.ಶಿವಯೋಗೀಶ್ವರ ಶ್ರೀ ಮಾತನಾಡಿ, ಕನ್ಹೇರಿ ಶ್ರೀಗಳಿಗೆ ಕೆಟ್ಟ ಹೆಸರು ತರಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ಸರ್ಕಾರ ಈ ಕೂಡಲೇ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ಗಾಳಿ ಮರೇಮ್ಮ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿ ವರೆಗೆ ಕನ್ಹೇರಿ ಶ್ರೀಗಳ ಭಾವಚಿತ್ರ ಹಿಡಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಅರವಿಂದ ಕಟಗಿ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ನಿಂಗಪ್ಪ ಜಟಾರ, ಯಶೋಧಾ ಸಂಬೋಜಿ, ಶಿವಶರಣಾನಂದ ಶ್ರೀ, ಗಿರೀಶಾನಂದ ಸ್ವಾಮೀಜಿ, ಅಭಯಾನಂದ ಶ್ರೀ, ಅಕ್ಕಮಹಾದೇವಿ ತಾಯಿ, ಸಾಸ್ವಿಹಳ್ಳಿಯ ಶ್ರೀ ಕಸ್ತೂರೆಮ್ಮಾ ಮಾತಾ ಹಾಗೂ ವೀರಶೈವ ಮಹಾಸಭೆಯ ತಾಲೂಕು ಅಧ್ಯಕ್ಷ ಉಮೇಶ ಹೆಬಸೂರ ಸೇರಿದಂತೆ ಪ್ರಮುಖರು ಹಾಜರಿದ್ದರು.