ಶಿರಸಿ: ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಹಾಗೂ ಆಸ್ತಿ ತೆರಿಗೆ ಪಾವತಿಸುತ್ತಾ ಬಂದಿರುವ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುವ ಆದೇಶವನ್ನುರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.ಮಂಗಳವಾರ ತಾಲೂಕಿನ ಇಸ್ಳೂರು ಗ್ರಾಮ ಪಂಚಾಯಿತಿ ಎದುರು ಬಿಜೆಪಿ ಗ್ರಾಮೀಣ ಮಂಡಲ ಹಾಗೂ ನಗರ ಮಂಡಲದ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಮನೆ ನಮ್ಮ ಹಕ್ಕು ಜನಾಗ್ರಹ ಆಂದೋಲನದಲ್ಲಿ ಮಾತನಾಡಿದರು.ಪಂಚಾಯತ್ ರಾಜ್ ಆಯುಕ್ತಾಲಯವು ಆ. 13ರಂದು ಹೊರಡಿಸಿರುವ ಮಾರ್ಗಸೂಚಿಯಲ್ಲಿ, ಸರ್ಕಾರಿ ಭೂಮಿ, ಅರಣ್ಯ ಭೂಮಿ ಹಾಗೂ ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳ ಒಡೆತನಕ್ಕೆ ಸೇರಿದ ಭೂಮಿಯ ಅತಿಕ್ರಮಣದಾರರ ಆಸ್ತಿಗಳ ದಾಖಲೆಗಳನ್ನು ಇ- ಸ್ವತ್ತು/ಸಂಬಂಧಿತ ತಂತ್ರಾಂಶ ವ್ಯವಸ್ಥೆಯಿಂದ ಕೈಬಿಡುವುದು ಹಾಗೂ ಅಂತಹ ಆಸ್ತಿಗಳಿಂದ ಆಸ್ತಿ ತೆರಿಗೆ ವಸೂಲಿ ಮಾಡದಿರುವ ಕುರಿತು ನಿರ್ದೇಶನ ನೀಡಲಾಗಿದೆ. ಇದು ಜನರ ಬದುಕನ್ನು ಕಸಿದುಕೊಳ್ಳುವ ಆದೇಶವಾಗಿದೆ. ಇದರ ವಿರುದ್ಧ ಬಿಜೆಪಿ ಜಿಲ್ಲಾದ್ಯಂತ ನಿರಂತರ ಪ್ರತಿಭಟನೆ ಮಾಡಲಿದೆ ಎಂದರು.ಈಗಾಗಲೇ ಬಡವರು ಮನೆ ನಂಬರ್ ಮತ್ತು ಪಂಚಾಯಿತಿ ದಾಖಲೆಗಳನ್ನು ಆಧರಿಸಿ ಅನೇಕ ಕುಟುಂಬಗಳು ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ, ಬ್ಯಾಂಕ್ ವ್ಯವಹಾರಗಳು, ವಿಳಾಸದ ದಾಖಲೆಗಳು ಹಾಗೂ ವಿವಿಧ ಆಡಳಿತಾತ್ಮಕ ಸೇವೆಗಳನ್ನು ಪಡೆದುಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅದನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಂಸದರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನವೀನ್ ಶೆಟ್ಟಿ, ನಾರಾಯಣ ಹೆಗಡೆ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೆರ್, ಉಪಾಧ್ಯಕ್ಷ ನಾಗರಾಜ್ ನಾಯ್ಕ್, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ, ಸದಾನಂದ ಭಟ್, ಚಂದ್ರು ಏಸಳೆ, ನಿರ್ಮಲಾ ಶೆಟ್ಟಿ ಸೇರಿದಂತೆ ಅನೇಕರಿದ್ದರು.