ಹುಬ್ಬಳ್ಳಿ:
ಭಾರತದಲ್ಲಿ ಪ್ರಜಾಸತ್ತೆಯು ಯಶಸ್ವಿಯಾಗಿ ಕಾರ್ಯ ಮಾಡುತ್ತಿಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್.ಎಸ್. ಪಟಗುಂಡಿ ಹೇಳಿದರು.ಅವರು ನಗರದ ಶರ್ಮಾ ಭವನದಲ್ಲಿ ಡಾ. ಶರ್ಮಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಾಹಿತಿ ದಿ. ಎಂಬಾರ್ ಭಾಷ್ಯಾಚಾರ್ಯರ 39ನೇ ಶ್ರದ್ಧಾ ಸಮರ್ಪಣಾ ದಿನದ ಅಂಗವಾಗಿ ಏರ್ಪಡಿಸಿದ್ದ ಭಾರತದ ಪ್ರಜಾಸತ್ತೆ ಎತ್ತ ಸಾಗಿದೆ? ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.ಭಾರತದಲ್ಲಿ ಪ್ರಜಾಪ್ರಭುತ್ವವು ಎತ್ತ ಸಾಗಿದೆ? ಎಂಬ ಪ್ರಶ್ನೆಗೆ ಉತ್ತರಿಸಬೇಕಾದರೆ, ಅನೇಕ ಆಯಾಮಗಳನ್ನು ಪರಿಶೀಲಿಸಿ ನಿರ್ಧರಿಸಬೇಕಿದೆ. ಅವುಗಳಲ್ಲಿ ಭಾರತದಲ್ಲಿ ಸಮಾನತೆ ಇದೆಯೇ?, ನಾಗರಿಕ ಸಮಾಜ ಬಲಿಷ್ಠವಾಗಿದೆಯೇ?, ಪ್ರಜಾಸತ್ತೆಯ ಸಂಸ್ಥೆಗಳಾದ ಸಂಸತ್ತು ಮುಂತಾದವು ಚೈತನ್ಯಯುತವಾಗಿ ನಡೆಯುತ್ತಿದೆಯೇ?, ಕಾಲಕಾಲಕ್ಕೆ ನಿಗದಿಸಿದಂತೆ ಚುನಾವಣೆಗಳು ನಡೆಯುತ್ತವೆಯೇ?, ರಾಜಕೀಯ ಸಂಸ್ಕೃತಿ ಹೇಗಿದೆ? ಮುಂತಾದವುಗಳನ್ನು ಪರಿಶೀಲಿಸಿದಾಗ ನಮ್ಮ ಭಾರತದ ಪ್ರಜಾಸತ್ತೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣಸಿಗುತ್ತಿದೆ ಎಂದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ ಮಾತನಾಡಿ, ಭಾರತೀಯ ಚುನಾವಣಾ ರಂಗವು ರಣರಂಗವಾಗಿದೆ. ಧಾರ್ಮಿಕ ವೈಷಮ್ಯ, ದ್ವೇಷ ರಾಜಕಾರಣ ತಾಂಡವವಾಡುತ್ತಿದ್ದು, ಪ್ರಜಾಸತ್ತೆಯ ಮುಖವಾಡ ತಾಳಿ ಸಿರಿವಂತರು-ಬಲಾಢ್ಯರು ಆಳುವ ವ್ಯವಸ್ಥೆ ನಿರ್ಮಾಣವಾಗಿದೆ. ಈ ಬೆಳವಣಿಗೆಗಳು ಪ್ರಜಾಸತ್ತೆಯ ವಿಫಲತೆ ನಿರೂಪಿಸುತ್ತವೆ ಎಂದು ಹೇಳಿದರು.ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಇಂದಿನ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಹೇಗಾದರೂ ಮಾಡಿ ಅಧಿಕಾರ ಪಡೆಯುವುದು ರಾಜಕೀಯ ಪಕ್ಷಗಳ ಗುರಿಯಾಗಿದೆ. ಅಧಿಕಾರ ಪಡೆದ ಮೇಲೆ ಅದನ್ನು ಉಳಿಸಿಕೊಳ್ಳಲು ಹಾಗೂ ಆ ಅವಧಿ ಮುಗಿದರೆ ಮತ್ತೆ ಹೇಗಾದರೂ ಮಾಡಿ ಆ ಅಧಿಕಾರ ಪಡೆದುಕೊಳ್ಳುವುದು ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಹಾಗೂ ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಎಸ್. ಶರ್ಮಾ ಮಾತನಾಡಿದರು. ರವೀಂದ್ರ ಶಿರೋಳ್ಕರ್ ನಿರೂಪಿಸಿದರು. ಡಾ. ಸೋಮಶೇಖರ ಹುದ್ದಾರ ವಂದಿಸಿದರು.