ಕಾಂಗ್ರೆಸ್ ಸರ್ಕಾರದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ

KannadaprabhaNewsNetwork |  
Published : Jun 26, 2025, 01:32 AM ISTUpdated : Jun 26, 2025, 01:57 PM IST
ಪೋಟೋ: 25ಎಸ್‌ಎಂಜಿಕೆಪಿ05ಶಿವಮೊಗ್ಗ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಬುಧವಾರ ರಾಜೀವ್‌ಗಾಂಧಿ ಯೋಜನೆಯ ವಸತಿ ಮನೆಗಳ ಹಗರಣ ಹಾಗೂ ಮುಸಲ್ಮಾನರಿಗೆ ಮಿತಿಮೀರಿದ ಮೀಸಲಾತಿ ಕೊಡುತ್ತಿರುವ ರಾಜ್ಯ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಶೇ.85ರಷ್ಟು ಲೂಟಿ ಮಾಡಿದ್ದೂ ಅಲ್ಲದೆ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆರೋಪಿಸಿದರು.

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಶೇ.85ರಷ್ಟು ಲೂಟಿ ಮಾಡಿದ್ದೂ ಅಲ್ಲದೆ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆರೋಪಿಸಿದರು.

ರಾಜೀವ್‌ಗಾಂಧಿ ಯೋಜನೆಯ ವಸತಿ ಮನೆಗಳ ಹಗರಣ ಹಾಗೂ ಮುಸಲ್ಮಾನರಿಗೆ ಮಿತಿಮೀರಿದ ಮೀಸಲಾತಿ ಕೊಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಬಿಜೆಪಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಘಟಕದಿಂದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮುಸಲ್ಮಾನರ ತುಷ್ಠೀಕರಣಕ್ಕಾಗಿಯೇ ಇರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಅಲ್ಪಸಂಖ್ಯಾತರಿಗೋಸ್ಕರ ಇರುವುದೇ ಕಾಂಗ್ರೆಸ್ ಸರ್ಕಾರ. ಬಡವರ ಪರವಾಗಿ ಇರುವಂತಹದ್ದು ಬಿಜೆಪಿ. ವಸತಿ ಹಂಚಿಕೆಯಲ್ಲಿ ಹಣ ತೆಗೆದುಕೊಂಡು ವಸತಿ ನೀಡುತ್ತಿರುವುದು ನೀಚ ಸರ್ಕಾರವಾಗಿದೆ. ರಾಜೀವ್‌ಗಾಂಧಿ ವಸತಿ ನಿಗಮದ ಹೆಸರಿಟ್ಟುಕೊಂಡು ವಸತಿ ಹಂಚಿಕೆಯಲ್ಲೂ ಭ್ರಷ್ಟಾಚಾರ ಮಾಡಿ, ರಾಜೀವ್‌ಗಾಂಧಿಯವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ದೂರಿದರು.

ಬಿಜೆಪಿ ಸರ್ಕಾರವಿದ್ದಾಗ ಭಾಗ್ಯಲಕ್ಷ್ಮೀ ಬಾಂಡ್, ಸೈಕಲ್ ಕೊಟ್ಟಿದ್ದೆವು. ಅದನ್ನು ಬರೀ ಹಿಂದೂಗಳಿಗೆ ಮಾತ್ರ ಕೊಟ್ಟಿಲ್ಲ. ಎಲ್ಲಾ ಜಾತಿಯವರಿಗೂ ನೀಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರ ಬಿಜೆಪಿಯದ್ದಾಗಿದ್ದು, ಕೂಲಿ ಕಾರ್ಮಿಕರ, ರೈತರ ಹಾಗೂ ಬಡವರ ಪಕ್ಷ ಬಿಜೆಪಿ ಎಂದರು.

ಬಿಜೆಪಿ ಬಡವರ ಪರ ಆಲೋಚನೆ ಮಾಡುವ ಪಕ್ಷವಾಗಿದೆ ಎಂದು ಸಾಬೀತು ಮಾಡಿದ್ದೇವೆ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಯಾರ್‍ಯಾರು ಭೂಮಿ ಮೇಲೆ ವಾಸಮಾಡುತ್ತಿದ್ದಾರೆ ಅವರು ಯಾವುದೇ ಜಾತಿ ಜನಾಂಗಕ್ಕೆ ಸೇರಿದವರಾದರೂ ಅವರ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಪ್ರಶ್ನಿಸಬೇಕಾಗುತ್ತದೆ. ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ಕಾಪಾಡಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರದಲ್ಲಿ ಸಾವಿರಾರು ಕೋಟಿ ರು. ಹಣ ಲೂಟಿಯಾಗಿದೆ. ಎಲ್ಲಾ ಇಲಾಖೆಗಳಲ್ಲೂ ಹಾಗೂ ನಿಗಮಗಳಲ್ಲೂ ಭ್ರಷ್ಟಾಚಾರ ಆಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರಿಯಾಗಿ ತನಿಖೆ ನಡೆಯದೇ ಇನ್ನೂ ನ್ಯಾಯ ಸಿಕ್ಕಿಲ್ಲ. ಅವರ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ್ದರೂ, ಇದೂವರೆಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರಕ್ಕೆ ನೈತಿಕತೆ ಇದೆ ಎನ್ನುವುದಾದರೆ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಿ, ಚುನಾವಣೆ ಎದುರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕರಾದ ಕೆ.ಬಿ.ಅಶೋಕ್‌ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖರಾದ ಎಸ್.ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ರಮೇಶ್, ನಾಗರಾಜ್, ಶಂಕರ್‌ಗನ್ನಿ, ಸುರೇಖಾ ಮುರಳೀಧರ್, ಹರಿಕೃಷ್ಣ, ಶಿವಕುಮಾರ್, ಪ್ರಭು, ರಾಹುಲ್‌ಬಿದಿರೆ ಮತ್ತಿತರರಿದ್ದರು.

PREV
Read more Articles on

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ