ಪ್ರಜಾಪ್ರಭುತ್ವ ಧರ್ಮವನ್ನು ಪ್ರೀತಿಯ ನೆಲೆಗಟ್ಟಿನಲ್ಲಿ ಕಟ್ಟಬೇಕಿದೆ: ಲೇಖಕ ಬಿಳಿಗೆರೆ ಕೃಷ್ಣಮೂರ್ತಿ

KannadaprabhaNewsNetwork | Published : Dec 4, 2024 12:32 AM

ಸಾರಾಂಶ

ಪ್ರಜಾಪ್ರಭುತ್ವ ಭಾರತ ಹೊಸ ಧರ್ಮವಾಗಿದ್ದು ನಾವು ಹೊಸ ಪ್ರಜಾಪ್ರಭುತ್ವ ಧರ್ಮವನ್ನು ಪ್ರೀತಿಯ ನೆಲೆಗಟ್ಟಿನಲ್ಲಿ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಲೇಖಕ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು. ತಿಪಟೂರಿನ ಸಾಂಸ್ಕೃತಿಕ ಪ್ರತಿನಿಧಿಗಳಿಗೆ ಗೌರವ ಸಮರ್ಪಣೆ ಜನ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜನ ಸಂಭ್ರಮ ಕಾರ್ಯಕ್ರಮ: ಜನಸ್ಪಂದನ ಟ್ರಸ್ಟ್‌ನಿಂದ ಸಾಂಸ್ಕೃತಿಕ ಪ್ರತಿನಿಧಿಗಳಿಗೆ ಗೌರವ ಸಮರ್ಪಣೆ ಕನ್ನಡಪ್ರಭ ವಾರ್ತೆ ತಿಪಟೂರು

ಪ್ರಜಾಪ್ರಭುತ್ವ ಭಾರತ ಹೊಸ ಧರ್ಮವಾಗಿದ್ದು ನಾವು ಹೊಸ ಪ್ರಜಾಪ್ರಭುತ್ವ ಧರ್ಮವನ್ನು ಪ್ರೀತಿಯ ನೆಲೆಗಟ್ಟಿನಲ್ಲಿ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಲೇಖಕ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು. ನಗರದ ಪಲ್ಲಾಗಟ್ಟಿ ಲೇಔಟ್‌ನಲ್ಲಿ ಜನಸ್ಪಂದನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಿಪಟೂರಿನ ಸಾಂಸ್ಕೃತಿಕ ಪ್ರತಿನಿಧಿಗಳಿಗೆ ಗೌರವ ಸಮರ್ಪಣೆ ಜನ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳು ಕಲುಷಿತಗೊಳ್ಳುತ್ತಿದ್ದು ಜಾತಿ, ಧರ್ಮ, ಭಾಷಾ ರಾಜಕಾರಣ ಹೆಚ್ಚಾಗುತ್ತಿದೆ. ರಾಜಕೀಯದಲ್ಲಿ ಬದಲಾವಣೆಯಾಗಬೇಕು ಬದಲಾವಣೆಯ ಹೊಸ ಗಾಳಿ ಬೀಸಬೇಕಿದೆ ಆಗ ಮಾತ್ರ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನೆಮ್ಮದಿಯ ಜೀವನ ನಡೆಸಬಹುದು. ಮೊಬೈಲ್‌ನ ಕಾಲಘಟ್ಟವಾಗಿರುವ ಈಗಿನ ಕಾಲದ ಜನರಿಗೆ ಸಂಗೀತ, ಕಾದಂಬರಿ ಬರಹಗಳ ಬಗ್ಗೆ ಒಲವು ತುಂಬಾ ಕಡಿಮೆಯಾಗುತ್ತಿದೆ. ಯುವಪೀಳಿಗೆ ಕಥೆ, ಕಾದಂಬರಿ ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕಿದೆ. ನಮಗೆ ರೈತ ಚಳುವಳಿ ಹಾಗೂ ದಲಿತ ಚಳುವಳಿಗಳು ದೊಡ್ಡ ಮಟ್ಟದ ಹೋರಾಟಗಳನ್ನು ಮಾಡಬೇಕಾಗಿದೆ ಸಮಾಜದ ಎಲ್ಲಾ ಪ್ರಜೆಗಳು ನಮಗೆ ಕೊಟ್ಟಿರುವ ಕೆಲಸವನ್ನು ನಾವುಗಳು ಸರಿಯಾದ ಸಮಯಕ್ಕೆ ಮುಗಿಸುವುದು ನಮ್ಮ ಕರ್ತವ್ಯವೆಂದು ತಿಳಿಯಬೇಕಾಗಿದೆ ಎಂದರು. ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ, ನಮ್ಮ ಟ್ರಸ್ಟ್ ಸಮುದಾಯಗಳೆಡೆಗೆ ನಮ್ಮ ನಡೆ ಎಂಬ ಘೋಷವಾಕ್ಯದೊಂದಿಗೆ ಹಲವಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಜನೋಪಯೋಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಈಗಾಗಲೇ ಆರು ವರ್ಷಗಳನ್ನು ಪೂರೈಸಿದೆ. ಕೋವಿಡ್ ಸಂದರ್ಭ ಅಶಕ್ತರಿಗೆ ನೆರವು, ನಾಡಿನ ಮತ್ತು ಇತಿಹಾಸದ ಪುಟಗಳಲ್ಲಿ ಉಳಿದಿರುವ ಎಲ್ಲಾ ಮಹನೀಯರ ಜಯಂತಿ ಕಾರ್ಯಕ್ರಮಗಳು ಸೇರಿದಂತೆ ನಾಡಿನಲ್ಲಿ ಸಾಂಸ್ಕೃತಿಕ ವಲಯವನ್ನು ಜಾಗೃತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಿದೆ. ಈ ನಿಟ್ಟಿನಲ್ಲಿ ಜನಸ್ಪಂದನದ ಮೂಲಕ ತಿಪಟೂರಿನ ಸಾಂಸ್ಕೃತಿಕ ಪ್ರತಿನಿಧಿಗಳನ್ನು ಗೌರವಿಸುವುದು ನಮ್ಮ ಹೆಮ್ಮೆ ಎಂದರು. ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ರಾಜಕಾರಣವು ಪ್ರಜಾಪ್ರಭುತ್ವದ ಶ್ರೇಷ್ಠವಾದ ಪದ ಹಾಗೂ ಪ್ರಕ್ರಿಯೆಯಾಗಿದ್ದು ರಾಜಕಾರಣಿಗಳ ನಡೆಯಿಂದ ರಾಜಕಾರಣ ಪದಕ್ಕೆ ಕೆಡಕಾಗುತ್ತಿದೆ. ಇದರ ಬದಲಾವಣೆಗೆ ಸೂಕ್ಷ್ಮತೆಯ ಮನಸ್ಸಿನ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದರೆ ನಾವೇ ಸೋತಿದ್ದೇವೆ ಎಂದರ್ಥ ಏಕೆಂದರೆ ಮತದಾನ ಮಾಡುವ ವ್ಯಕ್ತಿಯ ಪ್ರತಿಬಿಂಬವೇ ಜನಪ್ರತಿನಿಧಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೇಖಕ ಎಸ್. ಗಂಗಾಧರಯ್ಯ, ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಚಿತ್ರ ಕಲಾವಿದ ಎಸ್. ವಿಷ್ಣುಕುಮಾರ್, ನೃತ್ಯಗಾರ್ತಿ ವಾಣಿ ಸತೀಶ್, ರಂಗಭೂಮಿ ನಟಿ ರಾಜೇಶ್ವರಿ, ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ಹಾಗೂ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜಪಾನ್ ಮಾದರಿಯಲ್ಲಿ ನಗರ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಮೂಲಕ ಪ್ರಕೃತಿ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವ ಸಂಕಲ್ಪ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ನಾಗರಾಜು ಕಲಾತಂಡದಿಂದ ವಚನಗಾಯನ ಏರ್ಪಡಿಸಲಾಗಿತ್ತು. ಸಂಘಟಕರಾದ ಶ್ರೀಕಾಂತ್ ಕೆಳಹಟ್ಟಿ, ದಿಲಾವರ್ ರಾಮದುರ್ಗ, ಅಲ್ಲಾಭಕ್ಷ, ಕಸಾಪ ಅಧ್ಯಕ್ಷ ಬಸವರಾಜು, ತಿಮ್ಲಾಪುರ ದೇವರಾಜು, ಬಿಳಿಗೆರೆ ನಾಗೇಶ್, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Share this article