ಕನ್ನಡಪ್ರಭ ವಾರ್ತೆ ಗಂಗಾವತಿ
ಮಂಗಳವಾರ ಸಂಜೆ 4 ಗಂಟೆಗೆ ಪ್ರಾರಂಭಗೊಂಡ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯು ಶ್ರೀಕೃಷ್ಣದೇವರಾಯ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸವಣ್ಣ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಮಹಾವೀರ ವೃತ್ತ ಸೇರಿ ಪ್ರಮುಖ ವೃತ್ತಗಳ ಮಾರ್ಗದ ಮೂಲಕ ತೆರಳಿತು. ಗಾಂಧಿ ವೃತ್ತದಲ್ಲಿ ಗಣೇಶನ ವಿಗ್ರಹಕ್ಕೆ ಮಹಿಳೆಯರು ಆರತಿ ಮಾಡಿದರು. ಅಲ್ಲದೇ ವಿಶೇಷ ಪೂಜೆ ಜರುಗಿತು.
ಪೊಲೀಸ್ ಬಿಗಿ ಭದ್ರತೆ:ಯಾವುದೇ ರೀತಿಯಿಂದ ಅಹಿತಕರ ಘಟನೆ ಸಂಭವಿಸಬಾರದೆಂಬ ಕಾರಣಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಗಾಂಧಿ ವೃತ್ತದ ಬಳಿ ಇಳಿ ಇರುವ ಜಾಮೀಯಾ ಮಸೀದಿ ಮುಂದೆ ಪೊಲೀಸ್ ಕಣ್ಗಾವಲು ಕೈಗೊಳ್ಳಲಾಗಿತ್ತು. ಕಳೆದ ಭಾರಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮಸೀದಿ ಮುಂದೆ ಮಂಗಳಾರತಿ ಮಾಡಿ ಕಾಯಿ ಒಡೆದಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಪೂರ್ವಭಾವಿಯಾಗಿ ಮಸೀದಿ ಮುಂದೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು.ಜೈ ಶ್ರೀರಾಮ್ ಘೋಷಣೆ:ಗುಂಡಮ್ಮ ಕ್ಯಾಂಪಿನಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ಪಲ್ಲಕ್ಕಿಯಲ್ಲಿ ಸಿಂಗರಿಸಲಾಗಿತ್ತು. ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ವತಃ ಪಲ್ಲಕ್ಕಿಯನ್ನು ಹೆಗಲ ಮೇಲೆ ಎತ್ತಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು.