ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಎಂ.ಸಿ. ಕಾಲನಿ ಬಿ ಬ್ಲಾಕ್‌ನಲ್ಲಿ ಸುಸ್ಥಿತಿಯಲ್ಲಿರುವ ಕಾಂಪೌಂಡ್ ಕೆಡವಿ ತೋಟಗಾರಿಕೆ ಇಲಾಖೆ ಹೊಸದಾಗಿ ಕಾಂಪೌಂಡ್ ಮರುನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿಯ ಮುಖಂಡರಾದ ಕೆ.ಪ್ರಸನ್ನಕುಮಾರ, ಸುರೇಶ ಗಂಡುಗಾಳೆ ಇತರರು ಕಾಮಗಾರಿಯನ್ನು ತಡೆದು, ಸುಸ್ಥಿತಿಯಲ್ಲಿದ್ದ ಕಾಂಪೌಂಡ್ ತೆರವು ಕಾಮಗಾರಿ ತಡೆದು ಪ್ರತಿಭಟಿಸಿದರು.
ಇದೇ ವೇಳೆ ಮಾತನಾಡಿದ ಕೆ.ಪ್ರಸನ್ನಕುಮಾರ, ಸುಸ್ಥಿತಿಯ ಕಾಂಪೌಂಡ್ ಕೆಡವಿದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ತೋಟಗಾರಿಕೆ ಸಚಿವರ ನಿವಾಸದ ಕೂಗಳತೆ ದೂರದಲ್ಲಿರುವ ಸುಸ್ಥಿತಿಯ ಕಾಂಪೌಂಡ್‌ನ ಪರಿಸ್ಥಿತಿ ಹೀಗಾದರೆ ಹೇಗೆ? ಗಟ್ಟಿಯಾಗಿದ್ದ ಕಾಂಪೌಂಡನ್ನೇ ಹಾಡಹಗಲೇ ಕೆಡವಿ, ಮರುನಿರ್ಮಾಣ ಮಾಡುವ ನೆಪದಲ್ಲಿ ತೋಟಗಾರಿಕೆ ಅಧಿಕಾರಿಗಳೇನು ಲೂಟಿಗೆ ಇಳಿದಿದ್ದಾರಾ ಎಂದು ಅವರು ಕಿಡಿಕಾರಿದರು.ಜಿಲ್ಲಾ ಸಚಿವರು ತಮ್ಮದೇ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಸುಸಜ್ಜಿತ ಸೈಜಗಲ್ಲಿನ ಗಟ್ಟಿಮುಟ್ಟಾದ ಕಾಂಪೌಂಡ್ ತೆರವು ಮಾಡುತ್ತಿರುವುದು, ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಇಂತಹ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು. ತೋಟಗಾರಿಕೆ ಅಧಿಕಾರಿಗಳಿಗೆ ಕಾಂಪೌಂಡ್ ಇಲ್ಲದ, ಒತ್ತುವರಿ ಆಗಿರುವ ಪಾರ್ಕ್‌ಗಳು ಕಾಣಲಿಲ್ಲವೇ? ನಿರ್ವಹಣೆ ಇಲ್ಲದ, ಗಿಡಗಳೇ ಇಲ್ಲದ ಪಾಳು ಬಿದ್ದ ಪಾರ್ಕ್‌ಗಳು ಕಾಣಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಸುಸ್ಥಿತಿಯ ಕಾಂಪೌಂಡ್ ಕೆಡವುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಕೋಟ್ಯಂತರ ರು.ಗಳ ಅನುದಾನವನ್ನು ಲೂಟಿ ಹೊಡೆಯುವ ಕಾಮಗಾರಿಗಳಿಗೆ ಬಳಸುವ ಮೂಲಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ತಕ್ಷಣವೇ ಕಾಮಗಾರಿಯನ್ನು ತಡೆಹಿಡಿದು, ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು, ಶಿಕ್ಷೆ ವಿಧಿಸಬೇಕು. ಅಗತ್ಯ ಇರುವಲ್ಲಿ ತೋಟಗಾರಿಕೆ ಇಲಾಖೆ ಕಾಮಗಾರಿ ಕೈಗೊಳ್ಳಲಿ ಎಂದು ಕೆ.ಪ್ರಸನ್ನಕುಮಾರ ಒತ್ತಾಯಿಸಿದರು.
ಮುಖಂಡರಾದ ಗಣೇಶ ರಾವ್, ಮಂಜುನಾಥ ಸಂಗೀತ, ಕಿರಣ್, ಪದ್ಮನಾಭ ಶೆಟ್ಟಿ, ಲಿಂಗರಾಜ, ಸೋಹನ್, ರಾಘವೇಂದ್ರ ಇತರರು ಇದ್ದರು.