ಪರಿಸರ ಸ್ವಚ್ಛತೆಯಿಂದ ಡೆಂಘೀ ನಿಯಂತ್ರಣ ಸಾಧ್ಯ: ಡಾ. ನಾಗಪ್ಪ ಸಲಹೆ

KannadaprabhaNewsNetwork |  
Published : May 29, 2024, 12:46 AM IST
ಬೇಲೂರು ತಾಲೂಕಿನ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಡೆಂಘೀ ದಿನದ ಅಂಗವಾಗಿ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಮಾತನಾಡಿದರು. | Kannada Prabha

ಸಾರಾಂಶ

ಡೆಂಘೀ ಮತ್ತು ಚಿಕನ್ ಗುನ್ಯಾ ಹರಡುವ ಈಡೀಸ್ ಸೊಳ್ಳೆಗಳು ಮನೆಯಲ್ಲಿ ಶೇಖರಣೆ ಮಾಡುವ ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನಿಮ್ಮ ಮನೆಯಲ್ಲಿನ ಡ್ರಮ್, ಬ್ಯಾರಲ್, ತೊಟ್ಟಿಗಳಲ್ಲಿ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ನಂತರ ನೀರು ತುಂಬಿಸಿ ಮುಚ್ಚಬೇಕು.

ಕನ್ನಡಪ್ರಭ ವಾರ್ತೆ ಬೇಲೂರು

ಪರಿಸರದ ಸ್ವಚ್ಛತೆಯಿಂದ ಮಾತ್ರ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಮಲೇರಿಯಾ, ಡೆಂಘೀ, ಚಿಕನ್ ಗುನ್ಯಾ ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ನಾಗಪ್ಪ ತಿಳಿಸಿದರು.

ಡೆಂಘೀ ಜ್ವರ ಮತ್ತು ಚಿಕನ್ ಗುನ್ಯಾ ಜ್ವರವು ವೈರಸ್ ನಿಂದ ಹರಡುತ್ತವೆ. ಹಗಲು ಹೊತ್ತಿನಲ್ಲಿ ಸೋಂಕಿತ ಈಡೀಸ್ ಸೊಳ್ಳೆ ಕಚ್ಚುವುದರಿಂದ ಡೆಂಘೀ ಜ್ವರವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ವಿಪರೀತ ಜ್ವರ, ತಲೆನೋವು, ಮಾಂಸ ಖಂಡಗಳು ಮತ್ತು ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿ, ಡೆಂಘೀ ಜ್ವರದ ಲಕ್ಷಣಗಳು. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು, ಡೆಂಘೀ ಜ್ವರವನ್ನು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು ಮತ್ತು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೀಜ್ವರಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂಬುದನ್ನು ತಿಳಿಸಿದರು.

ಕೀಟಶಾಸ್ತ್ರಜ್ಞ ರಾಜೇಶ್ ಕುಲಕರ್ಣಿ ಮಾತನಾಡಿ, ಡೆಂಘೀ ಮತ್ತು ಚಿಕನ್ ಗುನ್ಯಾ ಹರಡುವ ಈಡೀಸ್ ಸೊಳ್ಳೆಗಳು ಮನೆಯಲ್ಲಿ ಶೇಖರಣೆ ಮಾಡುವ ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನಿಮ್ಮ ಮನೆಯಲ್ಲಿನ ಡ್ರಮ್, ಬ್ಯಾರಲ್, ತೊಟ್ಟಿಗಳಲ್ಲಿ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ನಂತರ ನೀರು ತುಂಬಿಸಿ ಮುಚ್ಚಬೇಕು, ಎಲ್ಲ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳಲ್ಲಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ಘನ ತ್ಯಾಜ್ಯಗಳ ವಸ್ತುಗಳನ್ನು ವಿಲೇವಾರಿಗೊಳಿಸಿ ಹಾಗೂ ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ತಾಲೂಕಾ ಆರೋಗ್ಯ ಅಧಿಕಾರಿ ಡಾ.ವಿಜಯ್ ಮಾತನಾಡಿ, ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ವೃದ್ಧರು ಮತ್ತು ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು ಹಾಗೂ ಡೆಂಘೀ ಮತ್ತು ಚಿಕನ್ ಗುನ್ಯಾ ಕಾಯಿಲೆ ಇರುವವರು ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಿ, ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು. ಹಗಲು ಹೊತ್ತಿನಲ್ಲಿ ಈ ಸೊಳ್ಳೆಯು ಕಚ್ಚುವುದರಿಂದ ಮೈತುಂಬ ಬಟ್ಟೆ ಧರಿಸಬೇಕು ಎಂದು ತಿಳಿಸಿ, ಮಲೇರಿಯಾ, ಚಿಕನ್ ಗುನ್ಯಾ, ಡೆಂಘೀ ನಿಯಂತ್ರಿಸಲು ಸಮುದಾಯದ ಸಹಕಾರ ಅತಿ ಮುಖ್ಯ, ಮಳೆಗಾಲವು ಪ್ರಾರಂಭವಾಗಿರುವುದರಿಂದ ಡೆಂಘೀ, ಚಿಕನ್ ಗುನ್ಯಾ ಜ್ವರಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಪರಿಸರ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಕ್ಯಣ್ಣ ಕುಮಾರ್, ತಾಪಂಯ ಸಹಾಯಕ ನಿರ್ದೇಶಕ ದಯಾನಂದ್, ಗುರುಪ್ರಸಾದ್ , ಪಿಡಿಒ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ