ಕಾರವಾರ: ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದುವರೆಗೂ ೭೭ ಜನರಲ್ಲಿ ಸೋಂಕು ದೃಢವಾಗಿದೆ. ಅಂಕೋಲಾ, ಹೊನ್ನಾವರದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ.
ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣವಾಗಿದೆ. ಇಂತಹ ಲಕ್ಷಣ ಕಂಡುಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಘೀ ರೋಗದ ಹತೋಟಿಗೆ ಮುಖ್ಯ ವಿಧಾನವಾಗಿದೆ. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದುವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಎಲ್ಲ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್‌ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರ್, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದುವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಗಳನ್ನು ಬಳಸಿ ಅವು ಕಡಿಯದಂತೆ ಎಚ್ಚರಿಕೆ ವಹಿಸುವ ಮೂಲಕ ಡೆಂಘೀ ನಿಯಂತ್ರಣ ಮಾಡಬಹುದು.ಸೊಳ್ಳೆಗಳ ನಿಯಂತ್ರಣ: ಜನರು ಭಯಪಡುವ ಅವಶ್ಯಕತೆ ಇಲ್ಲ. ಎಚ್ಚರಿಕೆ ವಹಿಸಿದರೆ ಸಾಕು. ಡೆಂಘೀ ಚಿಕಿತ್ಸೆಗೆ ಬೇಕಾದ ಔಷಧ ನಮ್ಮಲ್ಲಿ ದಾಸ್ತಾನು ಇದೆ. ಡೆಂಘೀ ಲಕ್ಷಣ ಬಂದರೆ ನಿರ್ಲಕ್ಷ್ಯ ಮಾಡಿದೆ. ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಘೀ ರೋಗದ ಹತೋಟಿಗೆ ಮುಖ್ಯ ವಿಧಾನವಾಗಿದೆ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಕೆ, ಉಪಯೋಗಿಸದ ಒರಳುಕಲ್ಲು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಡಿಎಚ್‌ಒ ಡಾ. ನೀರಜ್ ಬಿ.ವಿ. ತಿಳಿಸಿದರು.
ವಿಶೇಷ ಗ್ರಾಮ ಸಭೆ: ಮಳೆಗಾಲ ಪ್ರಾರಂಭವಾಗುವ ಮೊದಲೇ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲೂ ಅಂತರ್ ಇಲಾಖಾ ಸಭೆ ನಡೆಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಸಿ ಅವರ ಪಾತ್ರದ ಬಗ್ಗೆ ತಿಳಿಸಲಾಗಿದೆ. ಗ್ರಾಪಂ ಮಟ್ಟದಲ್ಲೂ ವಿಶೇಷ ಗ್ರಾಮ ಸಭೆ ನಡೆಸಿ ಕೀಟಜನ್ಯ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗುವಂತೆ ಕ್ರಮವಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಆರ್‌ಸಿಎಚ್‌ಒ ಡಾ. ಕ್ಯಾ. ರಮೇಶ ರಾವ್ ತಿಳಿಸಿದರು.