ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿಯಿಂದ- ನಿಲಜಿ (ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ)ಯವರೆಗೆ ಮಾತ್ರ ನಿರ್ಮಾಣವಾಗಿರುವ ಚತುಷ್ಪಥ ರಸ್ತೆಗೆ ಇದೀಗ ಬೆಳಗಾವಿಯ ಸಾಂಬ್ರಾ ನಿಲ್ದಾಣದವರೆಗೆ ವಿಸ್ತರಣೆಗೆ ಹಸಿರು ನಿಶಾನೆ ದೊರೆತಿದೆ.
ನಿಲಜಿ ಗ್ರಾಮದ ನಂತರ ದ್ವಿಪಥ ರಸ್ತೆಯಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನದಾರರ ಪರದಾಟ ತಪ್ಪಿಲ್ಲ. ಈ ಸಂಚಾರ ಸಂಕಟ ನಿಯಂತ್ರಣಕ್ಕೆ ಸಚಿವ ಸತೀಶ ಜಾರಕಿಹೊಳಿ ಮದ್ದು ಅರೆದಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದವರೆಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ.ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿಯ ಮಾರ್ಗದಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಬರುತ್ತದೆ. ಈ ರಸ್ತೆ ಮಾರ್ಗದಲ್ಲಿ ವಾಹನ ದಟ್ಟಣೆ ನಿರಂತರವಾಗಿರುತ್ತದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆಯಿಂದ ನಿಲಜಿ ಗ್ರಾಮದವರೆಗೆ ಮಾತ್ರ ಚತುಷ್ಪಥ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ನಿಲಜಿ ಗ್ರಾಮದ ನಂತರ ದ್ವಿಪಥ ರಸ್ತೆ ಇದ್ದು, ವಾಹನ ದಟ್ಟಣೆಯಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ತೀವ್ರ ತೊಂದರೆ ಎದುರಾಗಿತ್ತು. ಸಾಂಬ್ರಾ ನಿಲ್ದಾಣದವರೆಗೆ ಚತುಷ್ಪಥ ರಸ್ತೆ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು.ನಿಲಜಿಯಿಂದ ಸಾಂಬ್ರಾ ವಿಮಾನ ನಿಲ್ದಾಣದವರೆಗೆ 4 ಕಿ.ಮೀ. ರಸ್ತೆಯನ್ನು ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಯೋಜನೆ ತಯಾರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ ₹17 ಕೋಟಿ, ರಸ್ತೆ ನಿರ್ಮಾಣ ಕಾಮಗಾರಿಗೆ ₹55 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಂದುಕೊಂಡಂತೆ ಸಾಂಬ್ರಾ ನಿಲ್ದಾಣದದವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾದರೆ ನಗರದಿಂದ ಏರ್ಪೋರ್ಟ್‌ಗೆ ಹೋಗುವ ಸಂಚಾರ ವ್ಯವಸ್ಥೆ ತೀರಾ ಸುಗಮವಾಗಲಿದೆ.ಲೋಕೋಪಯೋಗಿ ಇಲಾಖೆಯಿಂದ ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗುತ್ತದೆ. ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಡಿಸೆಂಬರ್ನಲ್ಲಿ ನಡೆಯುವ ಚಳಿಗಾಲ ಅಧಿವೇಶನ ವೇಳೆ ಉದ್ಘಾಟನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ನಡುವೆ ರಸ್ತೆ ವಿಭಜಕ ಇರಲಿದೆ. ಎರಡೂ ಕಡೆ ಪಾದಚಾರಿ ಮಾರ್ಗ ಮಾಡಲಿದ್ದು, ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ. ಫ್ಲೈಓವರ್ ನಿರ್ಮಾಣ ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣ ಆಗಲಿದ್ದು, ಆ ವೇಳೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಬರುವವರು ನೇರವಾಗಿ ಈ ಫ್ಲೈಓವರ್ ಮೂಲಕ ನಗರದ ಮಧ್ಯಭಾಗಕ್ಕೆ ಬಂದು ತಲುಪಬಹುದಾಗಿದೆ. ಬರುವ ಎರಡು ವರ್ಷದಲ್ಲಿ ಬೆಳಗಾವಿ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ.ಬೆಳಗಾವಿ ನಗರ ಇನ್ನು ಹೆಚ್ಚು ಬೆಳೆಯಬೇಕು ಎಂದರೆ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಸುಗಮವಾಗಿ ಇರಬೇಕು. ಆ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ನಮ್ಮ ಜೊತೆಗೆ ಚರ್ಚಿಸಿದ್ದಾರೆ. ರಸ್ತೆ ಅಗಲೀಕರಣ ಮತ್ತು ಭೂಸ್ವಾಧೀನಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಿಲ್ದಾಣದವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತಿದೆ. 4 ಕಿ.ಮೀ. ರಸ್ತೆಯನ್ನು ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಯೋಜನೆ ತಯಾರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ ₹17 ಕೋಟಿ, ರಸ್ತೆ ನಿರ್ಮಾಣ ಕಾಮಗಾರಿಗೆ ₹55 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.- ಮೊಹಮ್ಮದ ರೋಷನ್,
ಜಿಲ್ಲಾಧಿಕಾರಿ.