ಬೆಂಗಳೂರು : ಗಂಗೇನಹಳ್ಳಿಯ 1.11 ಎಕರೆ ಭೂಮಿ ಅಕ್ರಮ ಡಿನೋಟಿಫಿಕೇಷನ್ ಆರೋಪದ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾದ ಬೆನ್ನಲ್ಲೇ ಇದೀಗ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಲೋಕಾಯುಕ್ತ ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹಾಜರಾಗಿ ಪ್ರಕರಣ ಸಂಬಂಧ ಹೇಳಿಕೆ ನೀಡಿದರು.
ಸುಮಾರು ಒಂದು ತಾಸುಗಿಂತ ಹೆಚ್ಚಿನ ಸಮಯ ವಿಚಾರಣೆ ಎದುರಿಸಿದರು. ನಗರದ ಗಂಗೇನಹಳ್ಳಿ ಬಡಾವಣೆಯ 7/1ಬಿ, ಸಿ ಮತ್ತು ಡಿ ಸರ್ವೇ ನಂಬರ್‌ನಲ್ಲಿ 1.11 ಎಕರೆ ಜಮೀನನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಆಡಳಿತಾವಧಿಯಲ್ಲಿ ಡಿನೋಟಿಫೈ ಮಾಡಿರುವ ಕುರಿತು ಪ್ರಶ್ನೆಗಳನ್ನು ಕೇಳಿ ಹೇಳಿಕೆ ಪಡೆದುಕೊಳ್ಳಲಾಯಿತು.
ಕಳೆದ ಶನಿವಾರ ಯಡಿಯೂರಪ್ಪ ಅವರು ಸಹ ಇದೇ ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದರು. ಅವರ ಆಡಳಿತಾವಧಿಯಲ್ಲಿ ಡಿನೋಟಿಫೈ ಆಗಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಯಿತು.
ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಕಾಂಗ್ರೆಸ್‌ನ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಗಂಗೇನಹಳ್ಳಿಯಲ್ಲಿ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್‌ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾಧೀನಗೊಂಡಿತ್ತು. ಇದನ್ನು ಡಿನೋಟಿಫೈ ಮಾಡಬೇಕೆಂದು ರಾಜಶೇಖರಯ್ಯ ಎಂಬುವರು ಅರ್ಜಿ ಹಾಕಿದ್ದರು. 2007ರಲ್ಲಿ ಅರ್ಜಿ ಬಂದ ದಿನವೇ ಮುಖ್ಯಮಂತ್ರಿಯಾಗಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಡಿನೋಟಿಫೈ ಮಾಡಲು ಸೂಚಿಸಿದ್ದರು ಎಂದು ಆರೋಪಿಸಿದ್ದರು.
ಸರ್ಕಾರ ಬದಲಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅದೇ ಕಡತ ಅವರ ಮುಂದೆ ಬರಲಿದ್ದು, ಕಾನೂನು ಉಲ್ಲಂಘಿಸಿ 2009-10ರಲ್ಲಿ ಭೂಸ್ವಾಧೀನದಿಂದ ಕೈಬಿಡಲಾಗುತ್ತದೆ. ಡಿನೋಟಿಫಿಕೇಷನ್ ಆದ ಒಂದೇ ತಿಂಗಳಿಗೆ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವರಿಗೆ ಕ್ರಯಪತ್ರವಾಗುತ್ತದೆ. ಹೀಗೆ ಅಕ್ರಮವಾಗಿ ಡಿನೋಟಿಫೈ ಆದ ಜಮೀನು ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದೆ. ಇದು ವ್ಯವಸ್ಥಿತ ವಂಚನೆ ಎಂದು ದೂರಿದ್ದರು.
ಗಂಡಾಂತರ ತಂದುಕೊಳ್ಳುವ ಕೆಲಸ ಮಾಡಿಲ್ಲ:
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನನಗೆ ಭೂ ಗಂಡಾಂತರ ಎಂದು ಚರ್ಚೆ ನಡೆಯುತ್ತಿದ್ದು, ರಾಜಕೀಯ ಜೀವನದಲ್ಲಿ ಗಂಡಾಂತರ ತಂದುಕೊಳ್ಳುವ ಯಾವುದೇ ಕೆಲಸವನ್ನೂ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.
ರಾಜಕೀಯ ಒತ್ತಡದಿಂದ ನನ್ನ ಮೇಲಿನ ಈ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಈ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ನನ್ನಿಂದ ಆದೇಶವಾಗಿಲ್ಲ. ಈಗಾಗಲೇ ಪ್ರಕರಣದ ಬಗ್ಗೆ ಲೋಕಾಯುಕ್ತರು ಹೇಳಿಕೆ ದಾಖಲಿಸಿಕೊಂಡಿದ್ದರು. ಈಗ ಮತ್ತೆ ಹೇಳಿಕೆ ನೀಡಿದ್ದೇನೆ. ಪ್ರಕರಣದ ವಿಚಾರದಲ್ಲಿ ನನಗೆ ಯಾವ ಆತಂಕವೂ ಇಲ್ಲ ಎಂದರು.
ನಾನೇನು ತಪ್ಪು ಮಾಡಿ ಇಲ್ಲಿಗೆ ಬಂದಿಲ್ಲ. ಸ್ವಯಂಪ್ರೇರಿತವಾಗಿ ಬಂದಿದ್ದೇನೆ. ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ. ಶನಿವಾರ ಬೆಳಗ್ಗೆ 11 ಗಂಟೆಗೆ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ. ಈ ಸರ್ಕಾರದಲ್ಲಿರುವ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ದರೋಡೆಕೋರರು. ಆ ದಾಖಲೆಗಳನ್ನು ನೋಡಿದ ಮೇಲೆ ಕಾಂಗ್ರೆಸ್ ಸರ್ಕಾರದ ಸಚಿವರು ಮಾತನಾಡಲಿ ಎಂದು ಕುಮಾರಸ್ವಾಮಿ ತಿಳಿಸಿದರು.
ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳುಹಿಸಬೇಕು ಎಂದು ಹಿಂದಿನ ಐದು ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ ಸಂಚು ರೂಪಿಸಿದ್ದರು. ಅವರ ಆಸೆ ಈಡೇರಲಿಲ್ಲ. ಯಾಕೆಂದರೆ ಆ ಸಂದರ್ಭದಲ್ಲಿಯೂ ದಿನವೂ ಕಾಂಗ್ರೆಸ್ ನಾಯಕರ ಭ್ರಷ್ಟ ಮುಖವನ್ನು ಬಯಲು ಮಾಡುತ್ತಿದ್ದೆ. ನನ್ನ ಕಾಟ ತಡೆಯಲಾಗುತ್ತಿಲ್ಲ, ಒಂದು ದಿನವಾದರೂ ಇವನನ್ನು ಜೈಲಿಗೆ ಕಳಿಸಬೇಕು ಎಂದು ಹೊಂಚು ಹಾಕಿದ್ದರು. ಆಗಲೂ ಇವರಿಗೆ ನನ್ನನ್ನು ಏನೂ ಮಾಡಲು ಆಗಲಿಲ್ಲ, ಈಗಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.