22 ರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ

KannadaprabhaNewsNetwork |  
Published : Sep 20, 2025, 01:00 AM IST
9 | Kannada Prabha

ಸಾರಾಂಶ

ದಸರಾ ಪ್ರಮುಖ ಭಾಗವಾಗಿ ಪ್ರತಿ ವರ್ಷವು ಪುಸ್ತಕ ಮೇಳ ನಡೆಯಲಿದ್ದು, ಈ ಬಾರಿ ಹಿಂದೆಂದಿಗಿಂತಲೂ ವಿಭಿನ್ನವಾಗಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಸೆ.22 ರಿಂದ ಅ.1 ರವರೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದರು.

ನಗರದ ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಪ್ರಮುಖ ಭಾಗವಾಗಿ ಪ್ರತಿ ವರ್ಷವು ಪುಸ್ತಕ ಮೇಳ ನಡೆಯಲಿದ್ದು, ಈ ಬಾರಿ ಹಿಂದೆಂದಿಗಿಂತಲೂ ವಿಭಿನ್ನವಾಗಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.

ಪ್ರತಿ ದಿನವೂ ವಿಶೇಷತೆಯನ್ನು ಹೊಂದಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸೆ.22ರ ಸಂಜೆ 5ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಕಾರ್ಯದರ್ಶಿ ಡಾ.ಎಂ.ವಿ. ವೆಂಕಟೇಶ್, ನಿರ್ದೇಶಕಿ ಕೆ.ಎಂ. ಗಾಯತ್ರಿ ಭಾಗವಹಿಸುವರು ಎಂದು ಹೇಳಿದರು.

ಪುಸ್ತಕ ಮೇಳ ಉದ್ಘಾಟನೆಗೂ ಮುನ್ನ ಬೆಳಗ್ಗೆ 10.30ಕ್ಕೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನಡೆಯಲಿರುವ‌ ದಸರಾ ಉದ್ಘಾಟನಾ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕುರಿತು ಬರೆದಿರುವ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ಬುಕರ್ ಬಾನು- ಪುಸ್ತಕವನ್ನು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ ಎಂದರು.

ಪ್ರತಿ‌ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 8.30 ರವರೆಗೆ ನಡೆಯಲಿರುವ ಪುಸ್ತಕ ಪ್ರದರ್ಶನ‌ ಮತ್ತು ಮಾರಾಟ ಮೇಳದಲ್ಲಿ ನಿತ್ಯವೂ ವಿಶೇಷತೆ ಹೊಂದಿದ್ದು, ಸಾಹಿತಿಗಳೊಂದಿಗೆ ಸೆಲ್ಫಿ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳು ನಡೆಯಲಿದೆ. ಜೊತೆಗೆ ಪ್ರತಿ‌ದಿನ ಬೆಳಗ್ಗೆ 11ಕ್ಕೆ ಇದುವರೆವಿಗೂ ಬಿಡುಗಡೆ ಕಾಣದಿರುವ ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.

ಇನ್ನು ಲೇಖಕರು, ಪ್ರಕಾಶಕರಿಗೆ ಸಂಪರ್ಕ ಸೇತುವೆಯಾಗಿ ಪುಸ್ತಕ ಮೇಳ ಆಯೋಜನೆಗೊಂಡಿದ್ದು, ಒಟ್ಟು 90 ಮಳಿಗೆಗಳಲ್ಲಿ ‌ಸುಮಾರು 50 ಸಾವಿರ ಪುಸ್ತಕಗಳು, ಓದುಗರನ್ನು ಸೆಳೆಯಲಿದ್ದು, ಪುಸ್ತಕ ಪ್ರೇಮಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ನಗರಾದ್ಯಂತ ಸಂಚರಿಸಲು ಸೆ.20ರ ಬೆಳಗ್ಗೆ 11ಕ್ಕೆ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಪ್ರತಿಮೆ ಮುಂಭಾಗದಿಂದ ಪುಸ್ತಕ ರಥಕ್ಕೆ ಚಾಲನೆ ನೀಡಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮೈಸೂರು ವಿವಿ‌ ಪ್ರಸಾರಾಂಗದ ನಿರ್ದೇಶಕ ಡಾ. ನಂಜಯ್ಯ ಹೊಂಗನೂರು, ಸಮಿತಿ ಸದಸ್ಯರಾದ ರಾಜಶೇಖರ್ ಕದಂಬ, ಚಂದ್ರಶೇಖರ್, ಡಾ. ಮಹೇಶ್ ಚಿಕ್ಕಲೂರು, ಸುಚಿತ್ರಾ, ಮೈ.ನಾ. ಲೋಕೇಶ್, ಕೆ.ಎಸ್. ಶಿವರಾಮು, ರವಿನಂದನ್, ಪ್ರಮೋದ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ