75 ಸಾಧಕರಿಗೆ ಕನ್ನಡ ಸಂಸ್ಕೃತಿ ಇಲಾಖೆ ಪ್ರಶಸ್ತಿ ಗರಿ

KannadaprabhaNewsNetwork | Updated : Feb 01 2024, 03:25 PM IST

ಸಾರಾಂಶ

ಬುಧವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೀವಮಾನ ಸಾಧನೆಗಾಗಿ ಕೊಡಮಾಡುವ ವಿವಿಧ ಪ್ರಶಸ್ತಿಗಳನ್ನು 75 ಸಾಧಕರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಶಸ್ತಿಗಳ ಆಯ್ಕೆ ವಿಚಾರದಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ. ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೀವಮಾನ ಸಾಧನೆಗಾಗಿ ಕೊಡಮಾಡುವ ವಿವಿಧ ಪ್ರಶಸ್ತಿಗಳನ್ನು 75 ಸಾಧಕರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. 

ಕಲೆ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ. ಇದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. 

ಹೀಗಾಗಿ ನಮ್ಮ ಸರ್ಕಾರ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದರು. ಪ್ರಶಸ್ತಿಗಾಗಿ ಯಾವುದೇ ಕಾರಣಕ್ಕೂ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಇತರರ ಹೆಸರುಗಳನ್ನು ಶಿಫಾರಸು ಮಾಡಲ್ಲ. 

ಈ ವಿಚಾರದಲ್ಲಿ ನಾನು ಬಹಳ ನಿಷ್ಠುರವಾಗಿ ವರ್ತಿಸುತ್ತೇನೆ. ನನ್ನ ಮೇಲೆ ಒತ್ತಡ ಹಾಕುವ ಎಲ್ಲರಿಗೂ ನಾನು ಅಷ್ಟೇ ನಿಷ್ಠುರವಾಗಿ ಹೇಳಿಬಿಡುತ್ತೇನೆ. ನಿಜ ಸಾಧಕರಿಗೆ ಅವರ ಅರ್ಹತೆ ಆಧಾರದಲ್ಲಿ ಗೌರವ, ಸನ್ಮಾನಗಳು ಸಿಗಬೇಕು. ನಮ್ಮ ಸರ್ಕಾರ ಜನರ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಹೇಳಿದರು.

 ಬಸವಣ್ಣನವರು ಮೌಢ್ಯ ಮುಕ್ತ, ಜಾತಿ ಮುಕ್ತ, ವರ್ಗ ಮುಕ್ತ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಅದಕ್ಕೆ ದೇಹವೇ ದೇಗುಲ ಎಂದು ವಚನಕಾರರು ಪ್ರತಿಪಾದಿಸಿದ್ದಾರೆ. 

ಆದರೆ ಕೆಲವರು ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎಂಬ ನಂಬಿಕೆಯಿಂದ ಹೋಗುತ್ತಾರೆ. ಅವರ ನಂಬಿಕೆಯನ್ನೂ ಗೌರವಿಸುತ್ತೇವೆ. ಆದರೆ, ದೇವಸ್ಥಾನಗಳಿಗೆ ಇಂತಹದ್ದೇ ಬಟ್ಟೆ ಹಾಕಿಕೊಂಡು ಹೋಗಬೇಕೆನ್ನುವ ವಿಚಾರದಲ್ಲಿ ನಮಗೆ ನಂಬಿಕೆ ಇಲ್ಲ. 

ಶರ್ಟ್‌, ಪ್ಯಾಂಟ್‌, ಸೀರೆ ಹೀಗೆ ಯಾವುದನ್ನು ಬೇಕಾದರೂ ಧರಿಸಿಕೊಂಡು ಹೋಗಬಹುದು. ಇಂತಹದ್ದೇ ಬಟ್ಟೆ ಹಾಕಿಕೊಂಡು ಬನ್ನಿ ಎಂದು ಹೇಳುವುದು ಸರಿಯಲ್ಲ ಎಂದರು. 

ಭಕ್ತಿ ಶುದ್ಧವಾಗಿದ್ದರೆ ಸಾಕು. ಶುದ್ಧವಾದ ಭಕ್ತಿಯೇ ಇಲ್ಲದೇ ಆಷಾಢಭೂತಿಯ ಭಕ್ತಿ ಇದ್ದರೆ ಪ್ರಯೋಜನವೇನು? ಬಸವಾದಿ ಶರಣರು ಹೇಳಿರುವಂತೆ ದೇವರು ಇಲ್ಲೇ ಇದ್ದಾನೆ. ಭಗವಂತ ಎಲ್ಲಾ ಕಡೆಯೂ ಇದ್ದಾನೆ. 

ನಂಬಿಕೆಗಳ ವಿರೋಧಿಗಳಿಗೆ ನಾವು ವಿರುದ್ಧ ಇಲ್ಲ. ಯಾರ ನಂಬಿಕೆಗಳಿಗೂ ವಿರುದ್ಧವಿಲ್ಲ. ಆದರೆ, ಎಲ್ಲರೂ ಕೂಡ ಮನುಷ್ಯರಾಗಿ ಬದುಕಬೇಕು. ಪರಸ್ಪರ ದ್ವೇಷಿಸದೇ ಪರಸ್ಪರ ಪ್ರೀತಿಸಿ ಎಂಬುದನ್ನೇ ಎಲ್ಲ ಧರ್ಮಗಳೂ ಹೇಳಿವೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಾಗ ಮಾಡಬಾರದು.

ಜನರ ಮಧ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ದೇವರು, ಧರ್ಮದ ಬಗ್ಗೆ ಯಾರ ನಂಬಿಕೆ ಏನೇ ಇದ್ದರೂ ಎಲ್ಲರೂ ಮೊದಲು ಮನುಷ್ಯರಾಗಬೇಕು. 

ಮನುಷ್ಯ ಮನುಷ್ಯರನ್ನು ದ್ವೇಷಿಸಬಾರದು. ಇದೇ ಅತ್ಯುನ್ನತ ಮೌಲ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸರ್ಕಾರದ ಕಾರ್ಯದರ್ಶಿ ಎನ್‌.ಮಂಜುಳಾ, ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಉಪಸ್ಥಿತರಿದ್ದರು.

Share this article