ಘೋಷಿತ ಪ್ರಶಸ್ತಿ ಕೊಡಲು ಕನ್ನಡ-ಸಂಸ್ಕೃತಿ ಇಲಾಖೆಗೆ ಪುರುಸೊತ್ತಿಲ್ಲ

KannadaprabhaNewsNetwork |  
Published : Dec 18, 2023, 02:00 AM IST
The Department of Kannada-Culture is not empowered to give the declared award | Kannada Prabha

ಸಾರಾಂಶ

ಪ್ರಶಸ್ತಿ ನೀಡುವಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ತಜ್ಞರ ಸಮಿತಿಯಿಂದಲೇ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ವಿವಿಧ 17 ಪ್ರಶಸ್ತಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ಸುಮಾರು 60 ಸಾಧಕರಿಗೆ ಘೋಷಣೆ ಮಾಡಲಾಗಿದೆ. ಆದರೆ, ಇದುವರೆಗೂ ಈ ಯಾವ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಿ ಗೌರವಿಸುವ ಕನಿಷ್ಠ ಸೌಜನ್ಯವನ್ನು ಕನ್ನಡ-ಸಂಸ್ಕೃತಿ ಇಲಾಖೆ ಮೆರೆಯದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಖ್ಯಾತ ಕಲಾವಿದರು, ರಂಗಭೂಮಿ ಸೇವಕರು, ನಾಡಿಗಾಗಿ ಸೇವೆಗೈದ ಮಹನೀಯರನ್ನು ಗುರುತಿಸಿ, ಪ್ರಶಸ್ತಿ ಘೋಷಿಸಿ ನಾಲ್ಕೈದು ವರ್ಷವಾದರೂ ಅವರಿಗೆ ಪ್ರಶಸ್ತಿ ನೀಡಲು ಕನ್ನಡ-ಸಂಸ್ಕೃತಿ ಇಲಾಖೆಗೆ ಪುರುಸೊತ್ತಿಲ್ಲ!ಹೀಗೆ 60ಕ್ಕೂ ಮಹನೀಯರನ್ನು ಗುರುತಿಸಿ ಪ್ರಶಸ್ತಿ ಘೋಷಿಸಿದ್ದು, ಅವರಿಗೆ ಪುರಸ್ಕರಿಸಿಲ್ಲ. ದುರಂತ ಎಂದರೆ ಇದರಲ್ಲಿ ಈಗಾಗಲೇ ಕೆಲವರು ಮರಣ ಹೊಂದಿದ್ದಾರೆ. ಕಲಾವಿದರು ತಮಗೆ ಘೋಷಣೆಯಾದ ಪ್ರಶಸ್ತಿ ನೀಡುವಂತೆ ದುಂಬಾಲು ಬಿದ್ದಿಲ್ಲ.ಯಾವೆಲ್ಲ ಪ್ರಶಸ್ತಿ: ಗುಬ್ಬಿವೀರಣ್ಣ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಕನಕ-ಪುರಂದರ ಪ್ರಶಸ್ತಿ, ಟಿ. ಚೌಡಯ್ಯ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಜಾನಪದ ಶ್ರೀ, ಶಾಂತಲಾ ಪ್ರಶಸ್ತಿ ಸೇರಿದಂತೆ ಸುಮಾರು 17 ಪ್ರಶಸ್ತಿಗಳನ್ನು ಕನ್ನಡ-ಸಂಸ್ಕೃತಿ ಇಲಾಖೆ ನೀಡುತ್ತದೆ.ಪ್ರಶಸ್ತಿ ನೀಡುವಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ತಜ್ಞರ ಸಮಿತಿಯಿಂದಲೇ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ವಿವಿಧ 17 ಪ್ರಶಸ್ತಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ಸುಮಾರು 60 ಸಾಧಕರಿಗೆ ಘೋಷಣೆ ಮಾಡಲಾಗಿದೆ. ಆದರೆ, ಇದುವರೆಗೂ ಈ ಯಾವ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಿ ಗೌರವಿಸುವ ಕನಿಷ್ಠ ಸೌಜನ್ಯವನ್ನು ಕನ್ನಡ-ಸಂಸ್ಕೃತಿ ಇಲಾಖೆ ಮೆರೆಯದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ವೆಂಕಟೇಶಕುಮಾರ ದಾಸರಗೆ 2017ರಲ್ಲಿ ಕನಕ-ಪುರಂದರ ಪ್ರಶಸ್ತಿ ಘೋಷಿಸಲಾಯಿತು. ಆದರೆ, ಇದುವರೆಗೂ ನೀಡಿಲ್ಲ.ನಗದು ಪುರಸ್ಕಾರ: ಪ್ರಶಸ್ತಿ ಜತೆ ₹5 ರಿಂದ ₹10 ಲಕ್ಷ ನಗದು ಬಹುಮಾನವಿದೆ. ಇದನ್ನು ಕೊಡಲು ಸರ್ಕಾರದ ಬಳಿ ಹಣ ಇಲ್ಲವೋ ಅಥವಾ ಕೊಡುವ ಇಚ್ಛಾಶಕ್ತಿ ಇಲ್ಲವೋ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.ಲಕ್ಷಾಂತರ ರುಪಾಯಿ ಕಾರ್ಯಕ್ರಮಕ್ಕೆ ನೀಡಲು ಆಸಕ್ತಿ ತೋರಿಸುವ ಅಧಿಕಾರಿಗಳು ನಗದು ಬಹುಮಾನವನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡಲು ಅಷ್ಟಾಗಿ ಆಸಕ್ತಿ ಇಲ್ಲ. ಇದು ಕಮಿಷನ್ ರಹಿತ ಪಾವತಿಯಾಗುವುದರಿಂದ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪವಿದೆ.ಅಧಿಕಾರಿಗಳ ಪಾರುಪತ್ಯ: ಕನ್ನಡ, ಸಂಸ್ಕೃತಿ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರಿಗಳು ಬೇರೂರಿದ್ದು, ಯಾವುದೇ ಸರ್ಕಾರ ಬಂದರೂ ಅವರದೇ ಪಾರುಪತ್ಯ ಎನ್ನುವಂತಿದೆ. ಹೀಗಾಗಿ, ಇಂಥ ಅವಾಂತರ ಸಂಭವಿಸುತ್ತಲೇ ಇವೆ.

ಜೀವಂತ ಇಲ್ಲ: ಶಿವಮೊಗ್ಗದ ಎಸ್. ಮಾಲತಿ ಅವರಿಗೆ ಗುಬ್ಬಿವೀರಣ್ಣ ಪ್ರಶಸ್ತಿ ಘೋಷಣೆಯಾದರೂ ನೀಡಲೇ ಇಲ್ಲ. ಅವರು ನಿಧನರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಬಾಬಣ್ಣ ಕಲ್ಮನಿ ರಂಗಭೂಮಿಯ ಮೇರು ಕಲಾವಿದ. ರಾಜ್ಯದ ರಂಗಭೂಮಿ ಚರಿತ್ರೆಯಲ್ಲಿ ಅವರ ಹೆಸರು ಅಜರಾಮರ. ಇಂಥ ಬಾಬಣ್ಣ ಅವರಿಗೆ ಕಳೆದ ವರ್ಷವೇ ಗುಬ್ಬಿವೀರಣ್ಣ ಪ್ರಶಸ್ತಿ, ₹5 ಲಕ್ಷ ನಗದು ಬಹುಮಾನ ಘೋಷಣೆಯಾಗಿದೆ. ಆದರೆ, ಇದುವರೆಗೂ ನೀಡಿಲ್ಲ. ಆದರೆ, ಭಾನುವಾರ ಅವರು ನಿಧನವಾಗಿದ್ದಾರೆ.ಹಿಂದಿನ ಸರ್ಕಾರದ ಬೇಜವಾಬ್ದಾರಿಯಿಂದ ಪ್ರಶಸ್ತಿ ಘೋಷಿಸಿದ್ದರೂ ಇದುವರೆಗೂ ಪ್ರಶಸ್ತಿ ನೀಡಿಲ್ಲ. ಇದು ನಿಜಕ್ಕೂ ದುರಂತ. ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಿ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ-ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.ಬಾಬಣ್ಣ ಕಲ್ಮನಿ ರಂಗಭೂಮಿ ಕಲಾವಿದ. ಅವರಿಗೆ ಗುಬ್ಬಿವೀರಣ್ಣ ಪ್ರಶಸ್ತಿ ಘೋಷಣೆಯಾಗಿದ್ದರೂ ನೀಡಿಲ್ಲ. ಈಗ ಅದನ್ನು ಸ್ವೀಕರಿಸಲು ಅವರೇ ಇಲ್ಲದಂತಾಗಿದೆ ಎಂದು ಸಾಹಿತಿ ಎಚ್.ಎಸ್. ಪಾಟೀಲ್ ಹೇಳಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ