- ಸಾಮರ್ಥ್ಯ ಭವನದಲ್ಲಿ ಅಧಿಕಾರಿಗಳು, ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರ ಸಭೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಪಟಾಕಿ ಮಾರಾಟ ಮಳಿಗೆಗಳಿಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕಾಗಿ ತಹಸೀಲ್ದಾರ್ ಅವರು ನೋಡೆಲ್ ಅಧಿಕಾರಿಯಾಗಿದ್ದಾರೆ. ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪಟಾಕಿ ಮಾರಾಟಗಾರರು ಅನುಮತಿ ಪಡೆಯಬೇಕಾಗುತ್ತದೆ ಎಂದು ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಹೇಳಿದರು.ಬುಧವಾರ ತಾಲೂಕಿನ ಸಾಮರ್ಥ್ಯ ಭವನದಲ್ಲಿ ಅಧಿಕಾರಿಗಳ ಮತ್ತು ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರ ಸಭೆಯಲ್ಲಿ ಪಟಾಕಿ ಮಾರಾಟ ಸುರಕ್ಷಿತ ವ್ವವಸ್ಥೆಗಳ ಬಗ್ಗೆ ವಿವಿಧ ಇಲಾಖೆಗಳ ಮಾರ್ಗಸೂಚಿಗಳ ವಿವರಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ಅವರು ನೊಡಲ್ ಅಧಿಕಾರಿಯಾಗಿದ್ದಾರೆ. ಬೆಸ್ಕಾಂ, ಗ್ರಾಮ ಪಂಚಾಯಿತಿ ಹಂತದಲ್ಲಿ ಪಿಡಿಒಗಳು, ಅಗ್ನಿಶಾಮಕ ಇಲಾಖೆ, ಪೊಲೀಸ್ ಈ ಎಲ್ಲ ಇಲಾಖೆಗಳಿಂದ ಅನುಮತಿ ಪತ್ರವನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪಟಾಕಿ ಮಾರಾಟಗಾರರು ಪಡೆಯಬೇಕಾಗುತ್ತದೆ. ಇದರ ಜೊತೆಯಲ್ಲಿ ಜಿ.ಎಸ್.ಟಿ. ನೋಂದಣಿ ಮಾಡಿಸಿ, ನಕಲು ಪ್ರತಿ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಅಫಿಡವಿಟ್‌ಗಳನ್ನು ಅನುಮತಿಗೆ ಸಲ್ಲಿಸುವ ಅರ್ಜಿಯೊಂದಿಗೆ ನೀಡಬೇಕು ಎಂದು ಹೇಳಿದರು.ಸುರಕ್ಷತಾ ಕ್ರಮಗಳಿಗೆ ಸಹಕರಿಸಿ:
ಹಬ್ಬಗಳನ್ನು ಸಂತೋಷಕ್ಕಾಗಿ ಆಚರಿಸಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ನಮ್ಮ ನಿರ್ಲಕ್ಷ್ಯತನದಿಂದ ಸಂಕಷ್ಟಗಳನ್ನು ತಂದುಕೊಳ್ಳುವ ಅನೇಕ ಘಟನೆಗಳು ಈ ಹಿಂದೆ ಹಬ್ಬ ಆಚರಣೆ ವೇಳೆ ನಡೆದಿವೆ. ಇಂತಹ ಕೆಟ್ಟ ಘಟನೆಗಳಿಗೆ ಅವಕಾಶ ಕೊಡದಂತೆ ಎಲ್ಲ ರೀತಿಯಿಂದ ಎಚ್ಚರಿಕೆ ವಹಿಸಲು ಇಲಾಖೆಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿವೆ. ಇದಕ್ಕೆ ಪಟಾಕಿ ಮಾರಾಟಗಾರರು ಕೂಡ ಸಹಕರಿಸಬೇಕು ಎಂದು ತಿಳಿಸಿದರು.ಸಾಮಾನ್ಯವಾಗಿ ದೀಪಾವಳಿ ನಂತರ ಕಿರು ದೀಪಾವಳಿ, ತುಳಸಿ ಹಬ್ಬದಂದು ಕೂಡ ಜನರು ಪಟಾಕಿ ಹೊಡೆಯುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಅ.28ರಿಂದ ನ.26ರವರೆಗೆ ಪಟಾಕಿ ಮಾರಾಟಕ್ಕಾಗಿ ಅನುಮತಿ ನೀಡಬೇಕೆಂದು ಮಾರಾಟಗಾರು ಅಧಿಕಾರಿಗಳಿಗೆ ಮನವಿ ಮಾಡಿದರು. ಆಗ ಈ ಬೇಡಿಕೆಗೆ ಸ್ಪಂದಿಸಿ, ಅನುಮತಿ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಪಟಾಕಿಗಳನ್ನು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡುವಂತಿಲ್ಲ. ಅಗತ್ಯಕ್ಕೆ ತಕ್ಕಂತೆ ಹೋಲ್ ಸೇಲ್ ಮಾರಾಟಗಾರರಿಂದ ಪಟಾಕಿ ತರಿಸಿಕೊಂಡು ಮಾರಾಟ ಮಾಡಬೇಕು. ಮಾರಾಟ ಮಳಿಗೆಗಳಲ್ಲಿ ಅಗ್ನಿ ಪ್ರತಿಬಂಧಕಗಳು, ನೀರು, ಮರಳಿನ ಚೀಲಗಳನ್ನು ಇಟ್ಟಿರಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಪಟಾಕಿ ಮಾರಾಟಕ್ಕೆ ಅನುಮತಿ ನೀಡುವ ಪೂರ್ವದಲ್ಲಿ ಸ್ಥಳಗಳಿಗೆ ಭೇಟಿ ನೀಡಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಆನಂತರವಷ್ಟೇ ಅನುಮತಿ ನೀಡಬೇಕು. ಒಂದುವೇಳೆ ಇಲಾಖೆಗಳ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದಲ್ಲಿ ಆಂಥವರ ಪಟಾಕಿ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು. ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಹೇಳಿದರು.ಸಭೆಯಲ್ಲಿ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಶ್ಯಾಮ್ ವರ್ಗೀಸ್, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಚನ್ನಗಿರಿ ತಹಸೀಲ್ದಾರ್ ಶಂಕರಪ್ಪ, ಹೊನ್ನಾಳಿ ಬೆಸ್ಕಾಂ ಎಇಇ ಜಯಪ್ಪ, ನ್ಯಾಮತಿ ಬೆಸ್ಕಾಂ ಶ್ರೀನಿವಾಸ್, ಅಗ್ನಿಶಾಮಕ ದಳದ ಅಧಿಕಾರಿ ಪರಶುರಾಮಪ್ಪ, ನ್ಯಾಮತಿ ಪೊಲೀಸ್ ಇನ್‌ಸ್ಪೆಕ್ಟರ್ ರವಿ, ಕಂದಾಯ ಇಲಾಖೆ ಅಧಿಕಾರಿಗಳು, ಹೊನ್ನಾಳಿ, ಚನ್ನಗಿರಿ ನ್ಯಾಮತಿ ತಾಲೂಕುಗಳ ಪಟಾಕಿ ಮಾರಾಟಗಾರರು ಭಾಗವಹಿಸಿದ್ದರು.
- - -ಕೋಟ್ ಪಟಾಕಿ ಪರವಾನಿಗೆಯನ್ನು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಕೊಡಲಾಗುವುದು. ರಾತ್ರಿ 10 ಗಂಟೆ ನಂತರ ಪಟಾಕಿಗಳನ್ನು ಹೊಡೆಯುವಂತಿಲ್ಲ. ಮಾರಾಟಗಾರರು ನೇರವಾಗಿ ಮಕ್ಕಳಿಗೆ ಪಟಾಕಿ ಮಾರಾಟ ಮಾಡದೇ ಪೋಷಕರೊಂದಿಗೆ ಬಂದಾಗ ಮಾತ್ರ ಪಟಾಕಿ ನೀಡಬೇಕು
- ವಿ.ಅಭಿಷೇಕ್, ಉಪವಿಭಾಗಾಧಿಕಾರಿ- - - -16ಎಚ್.ಎಲ್.ಐ1:
ಹೊನ್ನಾಳಿ ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಅಧ್ಯಕ್ಷತೆಯಲ್ಲಿ ಪಟಾಕಿ ಮಾರಾಟಗಾರು ಮತ್ತು ಆಧಿಕಾರಿಗಳ ಸಭೆ ನಡೆಯಿತು.