ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಭದ್ರತಾ ಕಾರ್ಯಕ್ಕಾಗಿ 4400 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಹೇಳಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು. ಮೂರು ಲೋಕಸಭಾ ಕ್ಷೇತ್ರಗಳಿಗೆ ಒಳಪಡುವ ಈ ಎಲ್ಲ ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತೆಯಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.ಚುನಾವಣಾ ಭದ್ರತಾ ಕಾರ್ಯಕ್ಕಾಗಿ ಓರ್ವ ಎಸ್ಪಿ, ಇಬ್ಬರು ಅಡಿಷನಲ್ ಎಸ್ಪಿ, 9 ಮಂದಿ ಡಿವೈಎಸ್ಪಿ, 33 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್, 161 ಸಹಾಯಕ ಸಬ್‌ಇನ್ಸ್ಪೆಕ್ಟರ್, 546 ಹೆಡ್ ಕಾನ್‌ಸ್ಟೇಬಲ್, 1850 ಕಾನ್‌ಸ್ಟೇಬಲ್,1600 ಹೋಂಗಾರ್ಡ್ ಸಿಬ್ಬಂದಿ, 7 ಕೆಎಸ್‌ಆರ್‌ಪಿ ತುಕಡಿ, 1 ಸಿಐಎಸ್‌ಎಫ್, 3 ಕೇರಳ ಸ್ಯಾಪ್, 1 ತಮಿಳುನಾಡು ಸ್ಯಾಪ್ ಸೇರಿದಂತೆ 4400 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ 11 ಮಸ್ಟರಿಂಗ್ ಕೇಂದ್ರಗಳಿದ್ದು, ಎಲ್ಲ ಸ್ಟ್ರಾಂಗ್ ರೂಂಗಳು ಓಪನ್ ಆಗಿವೆ. ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಸ್‌ಗಳ ಮೂಲಕ ಮತಗಟ್ಟೆಗಳಿಗೆ ತೆರಳಿದರು. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನದ ಪ್ರಕ್ರಿಯೆ ನಡೆಯಲಿದೆ. ಯಾರು ಕ್ಯೂನಲ್ಲಿ ಇರುತ್ತಾರೋ ಅವರಿಗೆ ಟೋಕನ್ ಕೊಟ್ಟು, ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲದವರು ಯಾರು ಕ್ಷೇತ್ರದಲ್ಲಿ ಇರಬಾರದು. ಒಂದು ವೇಳೆ ಅವರು ಬಿಸಿನೆಸ್ ಕೆಲಸದ ಮೇಲೆ ಬಂದಿದ್ದರೆ ಪೋಲಿಂಗ್ ಸ್ಟೇಷನ್‌ಗಳ ಬಳಿ ಹೋಗಬಾರದು. ಚೆಕ್ ಪೊಸ್ಟ್‌ಗಳನ್ನು ಹಾಗೇ ಕಂಟಿನ್ಯೂ ಮಾಡಲಾಗಿದೆ. ಪೊಲೀಸ್ ಭದ್ರತೆ ಬಿಟ್ಟು, ಸಿಸಿಟಿವಿ ಕಣ್ಗಾವಲು, ಸೂಕ್ಷ್ಮ ವೀಕ್ಷಕರು ಇರುತ್ತಾರೆ. ಚುನಾವಣೆಗೆ ನಿಯೋಜಿತವಾಗಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಲ್ಲ ವಾಹನಗಳ ಮೇಲೆ ನಿಗಾ ಇಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ 55 ರೌಡಿಶೀಟರ್‌ಗಳ ಪಟ್ಟಿಯಲ್ಲಿ 32 ರೌಡಿಶೀಟರ್‌ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದು ಹೇಳಿದರು.