ದೃಶ್ಯಕಲಾ ಕಾಲೇಜು ಕಾಯಂ ಹುದ್ದೆಗೆ ಶೀಘ್ರವೇ ನಿಯೋಗ: ಪ್ರೊ.ಬಿ.ಡಿ.ಕುಂಬಾರ

KannadaprabhaNewsNetwork |  
Published : Jun 01, 2025, 01:43 AM IST
30ಕೆಡಿವಿಜಿ16, 17-ದಾವಣಗೆರೆಯ ದೃಶ್ಯಕಲಾ ಮಹಾ ವಿದ್ಯಾಲಯದ ವಜ್ರ ಮಹೋತ್ಸವದ ಸಮಾರೋಪ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಉದ್ಘಾಟನೆಯಲ್ಲಿ ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಇತರರು. | Kannada Prabha

ಸಾರಾಂಶ

ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ದೃಶ್ಯಕಲಾ ಮಹಾ ವಿದ್ಯಾಲಯಲ್ಲಿ 10-12 ಕಾಯಂ ಬೋಧಕರ ಹುದ್ದೆಗಳನ್ನು ಮಂಜೂರು ಮಾಡುವಂತೆ ಶೀಘ್ರವೇ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯುವುದಾಗಿ ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.

ರಾಷ್ಟ್ರೀಯ ಕಾರ್ಯಾಗಾರ । ಶೀಘ್ರ ಸಚಿವ ಎಸ್ಸೆಸ್ಸೆಂ ನೇತೃತ್ವದಲ್ಲಿ ಸಿಎಂ, ಉನ್ನತ ಶಿಕ್ಷಣ ಸಚಿವರ ಭೇಟಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ದೃಶ್ಯಕಲಾ ಮಹಾ ವಿದ್ಯಾಲಯಲ್ಲಿ 10-12 ಕಾಯಂ ಬೋಧಕರ ಹುದ್ದೆಗಳನ್ನು ಮಂಜೂರು ಮಾಡುವಂತೆ ಶೀಘ್ರವೇ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯುವುದಾಗಿ ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.

ನಗರದ ದಾವಿವಿ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ವಜ್ರ ಮಹೋತ್ಸವ ಸಮಾರೋಪ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಕಾಯಂ ಬೋಧಕರ ಹುದ್ದೆಗಳ ಕೊರತೆ ಬಗ್ಗೆ ನಿಯೋಗದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ದೃಶ್ಯಕಲಾ ಮಹಾ ವಿದ್ಯಾಲಯದ ಅಭಿವೃದ್ಧಿಗೆ ಇನ್ನೂ ಸಾಕಷ್ಟು ಕಾಯಂ ಹುದ್ದೆಗಳ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಕಾಲೇಜನ್ನು ಅಭಿವೃದ್ಧಿಪಡಿಸಲು ಅಗತ್ಯ ಸಿಬ್ಬಂದಿ ನೇಮಕಾತಿಗಾಗಿ ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಬಳಿ ನಿಯೋಗ ತೆರಳಲಾಗುವುದು ಎಂದು ಹೇಳಿದರು.

ಕಾಲೇಜಿನಲ್ಲಿ ಖಾಲಿ ಇರುವ ಎಲ್ಲಾ ಬೋಧಕ-ಬೋಧಕೇರ ಸಿಬ್ಬಂದಿ ನೇಮಕಾತಿಗೆ ಸರ್ಕಾರಕ್ಕೂ ಮನವಿ ಮಾಡಲಾಗುವುದು. ಕಲಾಕ್ಷೇತ್ರ ವಿಭಿನ್ನ ಅಭಿರುಚಿಯ ಅಧ್ಯಯನವಾಗಿದೆ. ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗದ ಭರವಸೆ ಸಿಗಬೇಕಾಗಿದೆ. ಕಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಜಿಸಲು ಸರ್ಕಾರಕ್ಕೆ ಕಾಲೇಜಿನ ಜೊತೆ ಹಳೆಯ ವಿದ್ಯಾರ್ಥಿಗಳೂ ಒತ್ತಡ ಹೇರಬೇಕು ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ ನಡೆಸುವತ್ತ ಕಾಲೇಜಿನವರು ಗಮನ ಹರಿಸಬೇಕು ಎಂದರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನ ಮೇಲಿನ ಅಭಿಮಾನದಿಂದ ವರ್ಷವಿಡೀ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದರಿಂದ ಕಾಲೇಜು ರಾಜ್ಯಾದ್ಯಂತ ಪ್ರಚಾರ ಪಡೆದು, ಬೆಳಕಿಗೆ ಬರಲು ಸಾಧ್ಯವಾಯಿತು. ಇದೇ ವಿಶ್ವಾಸ ಕಾಲೇಜಿನ ಮೇಲೆ ನಿರಂತರ ಇರಲಿ ಎಂದು ಕಿವಿಮಾತು ಹೇಳಿದರು.

ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವ, ಕಾಲೇಜಿನಲ್ಲಿ ಓದುವಾಗ ಆಗಿದ್ದ ಘಟನೆಗಳನ್ನು ಮೆಲಕು ಹಾಕಿದರು. ಕಾಲೇಜಿನ ಮೊದಲ ಲೋಕೋ ರಚಿಸಿದ್ದ ಹಳೆಯ ವಿದ್ಯಾರ್ಥಿ ಗಿರೀಶ ಪೊದ್ದಾರ್‌ರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಹಳೆಯ ವಿದ್ಯಾರ್ಥಿ, ಮುಂಬೈನ ಓಗಿಲ್ವಿ ಸಂಸ್ಥೆಯ ಕ್ರಿಯೇಟಿವ್ ಡೈರೆಕ್ಟರ್ ಹರೀಶ ಆಚಾರ್ಯ, ದಾವಿವಿ ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ, ಕುಲ ಸಚಿವ ಶಬ್ಬೀರ ಬಾಷಗಂಟಿ, ಪ್ರೊ.ಸಿ.ಎಚ್. ಮುರುಗೇಂದ್ರಪ್ಪ, ಬಾ.ಮ.ಬಸವರಾಜಯ್ಯ, ಎ.ಮಹಲಿಂಗಪ್ಪ, ಕಾಲೇಜು ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ, ಡಾ.ಸತೀಶಕುಮಾರ ವಲ್ಲೇಪುರೆ, ದತ್ತಾತ್ರೇಯ ಭಟ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ