ಕನ್ನಡಪ್ರಭ ವಾರ್ತೆ ತಿಪಟೂರು
ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದ ನಗರಸಭೆಯ ನಾಲ್ಕು ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಿ ತುಮಕೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದ ಯಮುನಾ ಧರಣೇಶ್ ನೇತೃತ್ವದ ನಗರಸಭೆ ಆಡಳಿತ ಅಲ್ಪಮತಕ್ಕೆ ಕುಸಿದಿದೆ. 2024ರ ಆಗಸ್ಟ್ 26 ರಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಯಮುನಾ ಧರಣೇಶ್ ಹಾಗೂ ಪ್ರತಿಸ್ಪರ್ಧಿಯಾಗಿ ಬಿಜೆಪಿ ಅಭ್ಯರ್ಥಿ ಲತಾ ಲೋಕೇಶ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮೇಘಶ್ರೀ ಭೂಷಣ್ ಹಾಗೂ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಸಂಗಮೇಶ್ ಸ್ವರ್ಧಿಸಿದ್ದರು. ನಗರಸಭೆಯ 31 ಸದಸ್ಯರು, ಶಾಸಕರು ಹಾಗೂ ಸಂಸದರು ಸೇರಿ 33 ಸಂಖ್ಯಾಬಲದಲ್ಲಿ ಬಿಜೆಪಿ 14ಜನ ಸದಸ್ಯರು ಇಬ್ಬರು ಜೆಡಿಎಸ್ ಸದಸ್ಯರು ಹಾಗೂ ಸಂಸದರ ಒಂದು ಮತ ಸೇರಿ ಬಿಜೆಪಿ 17 ಸದಸ್ಯರ ಬಲಹೊಂದಿದ್ದರೂ ಬಿಜೆಪಿಯ ಅಶ್ವಿನಿ ದೇವರಾಜು ಮತ್ತು ಪದ್ಮ, ಜೆಡಿಎಸ್‌ನ ಎಂ.ಬಿ ಜಯರಾಮ್ ಮತ್ತು ಆಸೀಫ್ ಬಾನು ಅಡ್ಡಮತದಾನ ಮಾಡಿದ ಪರಿಣಾಮ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಯಮುನಾ ಧರಣೇಶ್ ಅಧ್ಯಕ್ಷರಾಗಿ, ಮೇಘಶ್ರೀ ಭೂಷಣ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಬಿಜೆಪಿ ಹಾಗೂ ಜೆಡಿಎಸ್ ತಲಾ ಇಬ್ಬರು ಸದಸ್ಯರು ವಿಪ್ ಉಲ್ಲಂಘನೆ ಮಾಡಿ ಅಡ್ಡಮತದಾನ ಮಾಡಿದ್ದಾರೆ. ಪಕ್ಷಾಂತರ ಕಾಯ್ದೆ ಅಡಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಪಕ್ಷಾಂತರ ಕಾಯ್ದೆ ಅಡಿ, ನಾಲ್ಕು ಜನಸದಸ್ಯರನ್ನ ಅನರ್ಹಗೊಳಿಸಿ ಆದೇಶಿಸಿದ್ದಾರೆ.ನಗರಸಭೆ ಅಧಿಕಾರ ಅವಧಿ ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇರುವ ಹೊತ್ತಿನಲ್ಲಿ ಸದಸ್ಯರ ಅನರ್ಹತೆ ಆದೇಶ ಭಾರೀ ಸಂಚಲನ ಉಂಟುಮಾಡಿದೆ. ಇದರಿಂದ ಬಹುಮತದೊಂದಿಗೆ ತಿಪಟೂರು ನಗರಸಭೆ ಗದ್ದುಗೆ ಏರಿದ್ದ ಕಾಂಗ್ರೆಸ್ ಪಕ್ಷ ಅಲ್ಪಮತಕ್ಕೆ ಕುಸಿತ ಕಂಡಿದೆ.