ಗದಗ: ಇತ್ತೀಚೆಗೆ ಮನವಿ ಸಲ್ಲಿಸುವ ವೇಳೆ ರೈತರಿಗೆ ಏಕವಚನದಲ್ಲಿ ಮಾತನಾಡಿ, ಬೆದರಿಕೆ ವರ್ತನೆ ತೋರಿದ್ದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಕ್ಷಮೆ ಯಾಚಿಸಿದ್ದಾರೆ.
ಮಳೆಯನ್ನೂ ಲೆಕ್ಕಿಸದೆ ಸಾವಿರಾರು ರೈತರು ಪಾಳಾ, ಬಾದಾಮಿ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ರಸ್ತೆಯಲ್ಲಿ ಧರಣಿ ಸತ್ಯಾಗ್ರಹಕ್ಕೆ ಕುಳಿತ ರೈತರು, ಜಿಲ್ಲಾಧಿಕಾರಿಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕೆಂದು ಪಟ್ಟು ಹಿಡಿದರು. ಹೋರಾಟಕ್ಕೆ ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳು, ನಂದಿವೇರಿಮಠದ ಶಿವಕುಮಾರ ಶ್ರೀಗಳು ಸೇರಿದಂತೆ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು.
ಕ್ಷಮೆಯಾಚನೆ: ರೈತರ ಶಕ್ತಿ ಮತ್ತು ಹೋರಾಟದ ತೀವ್ರತೆಗೆ ಬೆದರಿದ ಜಿಲ್ಲಾಡಳಿತ, ಬೆಟಗೇರಿ ಹೊರವಲಯದ ನರಸಾಪುರ ಸಮೀಪದಿಂದಲೇ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಿತ್ತು. ಅವಳಿ ನಗರದ ಪ್ರಮುಖ ಬೀದಿಗಳಲ್ಲಿಯೂ ಪೊಲೀಸ್ ಸರ್ಪಗಾವಲನ್ನೇ ಹಾಕಲಾಗಿತ್ತು. ಇದನ್ನು ಗಮನಿಸಿದ ರೈತರು, ಇಷ್ಟೊಂದು ಪೊಲೀಸ್ ಬಂದೋಬಸ್ತ್‌ನ ಅವಶ್ಯಕತೆ ಇತ್ತೆ? ನಾವು ರೈತರು, ನಮ್ಮ ನ್ಯಾಯಯುತ ಹಕ್ಕು ಕೇಳಲು ಬರುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಸ್ವತಃ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ರೈತರ ಬಳಿ ಬಂದು ಬಹಿರಂಗವಾಗಿ ಕ್ಷಮೆಯಾಚಿಸಿದರೂ ರೈತರ ಆಕ್ರೋಶ ತಣ್ಣಗಾಗಲಿಲ್ಲ.ಡಿಸಿ ಮಾತು: ಆಗಿನ ಪರಿಸ್ಥಿತಿ ಹಾಗಿತ್ತು. ನಾನು ಏರುಧ್ವನಿಯಲ್ಲಿ ಮಾತನಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದ್ದು, ತಮ್ಮ ತಪ್ಪು ನಡವಳಿಕೆಗೆ ವಿಷಾದಿಸಿದರು. ಅನ್ನದಾತರ ಪ್ರಮುಖ ಬೇಡಿಕೆಗಳು