ವೀರಶೈವ ಮಹಾಸಭಾ ಚುನಾವಣೆಯಲ್ಲಿ ಕರ್ತವ್ಯ ಲೋಪ: ಆರೋಪ

KannadaprabhaNewsNetwork | Published : Sep 7, 2024 1:40 AM

ಸಾರಾಂಶ

ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿರುವ ವಿ.ಎಸ್ ಧನಂಜಯ ಕುಮಾರ್ ಅವರು ಮತಗಟ್ಟೆ ಅಧಿಕಾರಿಗಳು ಚುನಾವಣೆಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಸುಳ್ಳು ಮಾಹಿತಿ ನಮೂದಿಸಿ ಅಧಿಕಾರ ದುರುಪಯೋಗ ಮಾಡಿಕೊಂಡು ಕರ್ತವ್ಯ ಲೋಪದ ಎಸಗಿ ನಾನು ಮತ್ತು ನನ್ನ ತಂಡದ ಇತರರಿಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜುಲೈನಲ್ಲಿ ನಡೆದ ತಾಲೂಕು ವೀರಶೈವ ಮಹಾಸಭಾ ಘಟಕದ ಚುನಾವಣೆಯಲ್ಲಿ ವಿವಿಧ ಮತಗಟ್ಟೆಯಲ್ಲಿನ ಪೋಲಿಂಗ್‌ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ವೀರಶೈವ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ವಕೀಲ ವಿ.ಎಸ್.ಧನಂಜಯ ಕುಮಾರ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿರುವ ವಿ.ಎಸ್ ಧನಂಜಯ ಕುಮಾರ್ ಅವರು ಮತಗಟ್ಟೆ ಅಧಿಕಾರಿಗಳು ಚುನಾವಣೆಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಸುಳ್ಳು ಮಾಹಿತಿ ನಮೂದಿಸಿ ಅಧಿಕಾರ ದುರುಪಯೋಗ ಮಾಡಿಕೊಂಡು ಕರ್ತವ್ಯ ಲೋಪದ ಎಸಗಿ ನಾನು ಮತ್ತು ನನ್ನ ತಂಡದ ಇತರರಿಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದು ತಾಲೂಕಿನ ಸಮಸ್ತ ವೀರಶೈವ ಸಮುದಾಯದಕ್ಕೆ ಮಾಡಿರುವ ಅಪಮಾನ. ಮತಗಟ್ಟೆ ಅಧಿಕಾರಿಗಳಾಗಿ ಕೆಲಸ ಮಾಡಿದ ಶಿಕ್ಷಕರು ನನ್ನ ಎದುರಾಳಿ ಬಣದವರ ಆಸೆ ಆಮಿಷಗಳಿಗೆ ಬಲಿಯಾಗಿ ಎದುರಾಳಿ ಬಣಕ್ಕೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ದೂರಿದರು.

ನಿಯಮಾನುಸಾರ ಯಾವುದೇ ಮತಗಟ್ಟೆಗಳಲ್ಲೂ ಪೋಲಿಂಗ್ ಏಜೆಂಟರ್ ನೇಮಕ ಮಾಡಿಕೊಂಡಿಲ್ಲ. ಮೃತರಾಗಿರುವ ನೂರಾರು ಮತದಾರರ ಮತವನ್ನು ಮತಗಟ್ಟೆಯ ಅಧಿಕಾರಿಗಳೇ ಚಲಾಯಿಸಿದ್ದಾರೆ. ಮೃತಪಟ್ಟಿರುವ ಮತದಾರರಲ್ಲದೇ ಸುಮಾರು 400ಕ್ಕೂ ಹೆಚ್ಚು ಜೀವಂತ ಮತದಾರರ ಮತವನ್ನೂ ಪೋಲಿಂಗ್ ಅಧಿಕಾರಿಗಳೇ ಚಲಾಯಿಸಿ ನನ್ನ ಮತ್ತು ನನ್ನ ತಂಡದ ಇತರೆ ಸ್ಪರ್ಧಿಗಳ ಸೋಲಿಗೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು.

ಪೋಲಿಂಗ್ ಅಧಿಕಾರಿಗಳ ನಕಲಿ ಮತದಾನದಿಂದ ನಾನು ಮತ್ತು ನನ್ನ ತಂಡದ ಸದಸ್ಯರು ಪರಾಭವಗೊಂಡಿದ್ದು ಮಾನಸಿಕವಾಗಿ ನೊಂದಿದ್ದೇವೆ. ಚುನಾವಣೆಯಲ್ಲಿ ಎದುರಾಳಿ ಬಣದೊಂದಿಗೆ ಶಾಮೀಲಾಗಿ ಕರ್ತವ್ಯ ಲೋಪ ಮಾಡಿರುವ 38 ಜನ ಪೋಲಿಂಗ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸುವಂತೆ ತಮ್ಮ ದೂರು ಪತ್ರದಲ್ಲಿ ಒತ್ತಾಯಿಸಿರುವುದಾಗಿ, ಮತದಾರರ ಮರಣ ಪ್ರಮಣ ಪತ್ರ, ಚುನಾವಣೆಯಲ್ಲಿ ಬಳಸಿದ ಮತದಾರರ ಪಟ್ಟಿ ಮತ್ತಿತರ ದಾಖಲೆಗಳನ್ನು ಪೊಲೀಸರಿಗೆ ನೀಡಿರುವುದಾಗಿ ಹೇಳಿದರು.

ಈ ವೇಳೆ ಧನಂಜಯ ಕುಮಾರ್ ಬೆಂಬಲಿಗ ಪಡೆಯ ಮೋದೂರು ವೀರಭದ್ರಪ್ಪ, ಸೋಮನಾಥಪುರ ನಂದೀಶ್ ಕುಮಾರ್, ನಿವೃತ್ತ ಶಿಕ್ಷಕ ಬೂಕಹಳ್ಳಿ ಶಿವಕುಮಾರ್, ಸಾಸಲು ಜಗದೀಶ್, ಮಂಜುನಾಥ್, ಬಸವರಾಜು, ಶ್ರೀಧರ, ಸಚಿನ್ ಶಿವಕುಮಾರ್, ಹರೀಶ್ ಮತ್ತಿತರರು ಇದ್ದರು.

Share this article