)
ಕಲಘಟಗಿ:
ಗ್ರಾಮದ ಅಶೋಕ ಗವಡೆನ್ನವರ ಅವರು ಜೀವಂತವಾಗಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆಂದು ನಮೂದಾಗಿರುವುದರಿಂದ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮಕ್ಕಳ ವ್ಯಾಸಂಗ ಸೇರಿದಂತೆ ಕುಟುಂಬದ ವಿವಿಧ ಅಗತ್ಯ ಕೆಲಸಗಳಿಗೆ ದಾಖಲೆಗಳನ್ನು ಪಡೆಯಲು ಮುಂದಾದಾಗ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ವಿಶೇಷವೆಂದರೆ, ಅಶೋಕ ಗವಡೆನ್ನವರ ಅವರ ತಂದೆಯ ಮರಣ ದಾಖಲೆಯನ್ನು ಪಡೆಯಲು ಆಧಾರ್ ಕಾರ್ಡ್ ನೀಡಿ ತೆರಳಿದಾಗ, ಅವರನ್ನೇ ಸರ್ಕಾರಿ ದಾಖಲೆಗಳಲ್ಲಿ ಮೃತ ವ್ಯಕ್ತಿ ಎಂದು ತೋರಿಸಲಾಗಿದೆ. ದಾಖಲೆಗಳಲ್ಲಿನ ಈ ದೋಷದಿಂದಾಗಿ ಕುಟುಂಬದ ಸದಸ್ಯರಿಗೆ ಅಗತ್ಯ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ಅಶೋಕ ಗವಡೆನ್ನವರ ಅಳಲು ತೋಡಿಕೊಂಡಿದ್ದಾರೆ.ಜೀವಂತ ವ್ಯಕ್ತಿಯ ಹೆಸರನ್ನು ಮೃತರ ಪಟ್ಟಿಗೆ ಸೇರಿಸಿದ್ದು ಹೇಗೆ? ಈ ತಪ್ಪು ಐದು ವರ್ಷಗಳ ಕಾಲ ಅಧಿಕಾರಿಗಳ ಗಮನಕ್ಕೆ ಬರದಿರುವುದು ಹೇಗೆ? ದಾಖಲೆ ಪರಿಶೀಲನೆ ಹಾಗೂ ನಿರ್ವಹಣೆಯಲ್ಲಿ ಇಷ್ಟೊಂದು ಲೋಪವಾಗಲು ಕಾರಣವೇನು ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಸಭೆಯಲ್ಲಿ ಅಶೋಕ ಗವಡೆನ್ನವರ ಕುಟುಂಬದ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಜೀವಂತ ವ್ಯಕ್ತಿಯನ್ನೇ ಸರ್ಕಾರಿ ದಾಖಲೆಗಳಲ್ಲಿ ಮೃತ ಎಂದು ನಮೂದಿಸಿರುವುದು ಸಾಮಾನ್ಯ ದಾಖಲೆ ದೋಷವಲ್ಲ. ಇದರಿಂದ ವ್ಯಕ್ತಿಯ ಗುರುತು, ಕುಟುಂಬದ ಹಕ್ಕುಗಳು ಹಾಗೂ ಸರ್ಕಾರಿ ಸೌಲಭ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.