92 ದಾಟಿದರೂ ಎಸ್. ಬಂಗಾರಪ್ಪನವರ ಜನಪ್ರಿಯತೆ ಶಾಶ್ವತ

KannadaprabhaNewsNetwork |  
Published : Oct 27, 2024, 02:17 AM ISTUpdated : Oct 27, 2024, 02:18 AM IST
ಫೋಟೊ:೨೬ಕೆಪಿಸೊರಬ-೦೧ : ಸೊರಬ ಪಟ್ಟಣದಲ್ಲಿ ತಾಲೂಕು ಬಿಜೆಪಿ ಮತ್ತು ಕುಮಾರ ಬಂಗಾರಪ್ಪ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಬಂಗಾರಪ್ಪ ಅವರ ಒಡನಾಡಿ ಮತ್ತು ಅಭಿಮಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. | Kannada Prabha

ಸಾರಾಂಶ

ಸರ್ವ ಸಮುದಾಯಗಳನ್ನು ತನ್ನೆಡೆಗೆ ಸೆಳೆಯುವ ಆಕರ್ಷಣೀಯ ಶಕ್ತಿ ಮತ್ತು ಎದೆಗಾರಿಕೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರಾಜ್ಯ ಕಂಡ ಜಾತ್ಯಾತೀತ ಮತ್ತು ಪಕ್ಷಾತೀತ ನಾಯಕ ಎಂದು ಮಾಜಿ ಪುರಸಭಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಎಂ.ಡಿ. ಉಮೇಶ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಸರ್ವ ಸಮುದಾಯಗಳನ್ನು ತನ್ನೆಡೆಗೆ ಸೆಳೆಯುವ ಆಕರ್ಷಣೀಯ ಶಕ್ತಿ ಮತ್ತು ಎದೆಗಾರಿಕೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರಾಜ್ಯ ಕಂಡ ಜಾತ್ಯಾತೀತ ಮತ್ತು ಪಕ್ಷಾತೀತ ನಾಯಕ ಎಂದು ಮಾಜಿ ಪುರಸಭಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಎಂ.ಡಿ. ಉಮೇಶ ಬಣ್ಣಿಸಿದರು.ಶನಿವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಮತ್ತು ಕುಮಾರ ಬಂಗಾರಪ್ಪ ಅವರ ಅಭಿಮಾನಿ ಬಳಗದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 92ನೇ ಜನ್ಮ ದಿನದ ಅಂಗವಾಗಿ ಬಸ್ಟಾಂಡ್ ಆವರಣದಲ್ಲಿರುವ ಎಸ್. ಬಂಗಾರಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ಬಂಗಾರಪ್ಪ ಅವರು ಯಾವುದೇ ಜಾತಿ ಮತ್ತು ವರ್ಗಕ್ಕೆ ಸೀಮಿತವಾದ ಆಡಳಿತ ನಡೆಸಲಿಲ್ಲ. ಬಸವಣ್ಣನವರ ತತ್ವ ಸಿದ್ಧಾಂತದಂತೆ ಕೆಳ ವರ್ಗದ ಕಲ್ಯಾಣ ಮಾಡಿದ ಧೀಮಂತ ನಾಯಕ. ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ಉನ್ನತಿಗೆ ಕಾರಣಕರ್ತರಾಗಿದ್ದರು. ಈ ಕಾರಣದಿಂದಲೇ 92 ವಸಂತಗಳನ್ನು ದಾಟಿದರೂ ಅವರ ಜನಪ್ರಿಯ ಯೋಜನೆಗಳು ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯವಾಗಿದೆ ಎಂದರು.ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಅಕ್ಷಯ, ಆರಾಧನ, ಗ್ರಾಮಿಣ ಕೃಪಾಂಕ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸೇರಿದಂತೆ ಅನೇಕ ಬಡವರ ಪರ ಯೋಜನೆಗಳನ್ನು ಘೋಷಿಸಿ, ಹಿಂದುಳಿದ ವರ್ಗದ ಜನರ ಹಾಗೂ ರೈತರ ಆರ್ಥಿಕ ಪ್ರಗತಿಗೆ ಕಾರಣರಾಗಿದ್ದಾರೆ. ದೇವರಾಜು ಅರಸು ಅವರ ಸಂಪುಟದಲ್ಲಿ ಸಚಿವರಾಗಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಅವರು, ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಅನೇಕ ಭೂ ರಹಿತರಿಗೆ ಜಮೀನು ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಜಿ.ಪಂ. ಸದಸ್ಯ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಗುರುಕುಮಾರ್ ಪಾಟೀಲ್ ಮಾತನಾಡಿ, ಎಸ್. ಬಂಗಾರಪ್ಪ ದಾರ್ಶನಿಕರ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಸಮಾಜವಾದಿ ಚಿಂತನೆಯೊಂದಿಗೆ ಜನರ ನಾಡಿಮಿಡಿತ ಅರಿತು ಆಡಳಿತ ನಡೆಸಿದ ಪ್ರಬುದ್ಧ ರಾಜಕಾರಣಿ ಎನಿಸಿದ್ದರು. ನೇರ ನಡೆ-ನುಡಿಯೊಂದಿಗೆ ಹಠ ಛಲದ ಮೂಲಕ ರಾಜಕಾರಣ ನಡೆಸಿದರೂ ಸಹ, ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು ಎಂದು ತಿಳಿಸಿದರು.

ಸದಾ ಬಡವರಿಗಾಗಿ ಹಂಬಲಿಸುತ್ತಿದ್ದ ಅವರ ಜನಪರ ಕಾಳಜಿಗೆ ಸಾಟಿ ಯಾರೂ ಇಲ್ಲ. ತಳ ಮಟ್ಟದ ಕಾರ್ಯಕರ್ತರನ್ನೂ ಸಹ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದ ಪ್ರಬುದ್ಧ ರಾಜಕಾರಣಿ. ಅವರ ಚಿಂತನೆ ಹಾಗೂ ಜನಪ್ರಿಯ ಯೋಜನೆಗಳನ್ನು ಬಿ.ಎಸ್. ಯಡಿಯೂರಪ್ಪನವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಅವರ ಒಡನಾಡಿ ಹಾಗೂ ಹಿರಿಯ ಅಭಿಮಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಲ್ಲಾ ಕಾರ್ಯದರ್ಶಿ ಮುಖಂಡರಾದ ಟಿ.ಆರ್. ಸುರೇಶ್, ಬಸವರಾಜಗೌಡ್ರು ತಾವರೆಹಳ್ಳಿ, ಬಸವರಾಜಗೌಡ್ರು ಬೆನ್ನೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಅಶೋಕ್ ಶೇಟ್, ಮಧುರಾಯ ಜಿ. ಶೇಟ್, ಉಪ್ಪಿನ ನಟರಾಜ, ಈಸೂಫ್ ಸಾಬ್, ಆರ್. ಮನವೇಲ್, ಮಹೇಶ್ ಸಂಪಗೋಡು, ಅಮಿತ್ ಗೌಡ, ಮಳಲಗದ್ದೆ ಗುರುಮೂರ್ತಿ, ಟೀಕಪ್ಪ ಕೊಡಕಣಿ, ಕೃಷ್ಣಮೂರ್ತಿ ಕೊಡಕಣಿ ಮೊದಲಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ