ಕನ್ನಡಪ್ರಭ ವಾರ್ತೆ ಸಕಲೇಶಪುರ
ಬೇಕಾಬಿಟ್ಟಿ ನಿಲುಗಡೆ:
ಪಟ್ಟಣದ ಎಲ್ಲೆಡೆ ವಾಹನ ಸವಾರರು ವಾಹನಗಳನ್ನು ಮನಬಂದಂತೆ ನಿಲುಗಡೆ ಮಾಡುತ್ತಿರುವುದು ವಾಹನ ದಟ್ಟಣೆಗೆ ಪ್ರಮುಖ ಕಾರಣವಾಗಿದ್ದರೆ, ಕೆಲವು ಆಟೋ ಚಾಲಕರು ಪ್ರಯಾಣಿಕರಿಗಾಗಿ ಹೆದ್ದಾರಿಯಲ್ಲೆ ಆಟೋಗಳನ್ನು ನಿಲ್ಲಿಸಿಕೊಳ್ಳುವುದು ಹಾಗೂ ಪ್ರಯಾಣಿಕರನ್ನು ಅರಸಿಕೊಂಡು ಹೆದ್ದಾರಿಯಲ್ಲಿ ಬೇಕಾಬಿಟ್ಟಿ ಸಂಚರಿಸುವುದು ಮತ್ತೊಂದು ಕಾರಣವಾಗಿದೆ. ಇವುಗಳ ನಿಯಂತ್ರಣ ಮಾಡಬೇಕಿರುವ ಪೊಲೀಸ್ ಇಲಾಖೆ ಅನ್ಯ ಕೆಲಸದಲ್ಲಿ ಮಗ್ನವಾಗಿದೆ.ಸಿಬ್ಬಂದಿ ಕೊರತೆ:ಟ್ರಾಫಿಕ್ ಸಮಸ್ಯೆ ನಿಯಂತ್ರಿಸುವ ಜವಾಬ್ದಾರಿ ಹೊತ್ತಿರುವ ಪಟ್ಟಣ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬುದು ಠಾಣೆಯ ಹಿರಿಯ ಅಧಿಕಾರಿಗಳ ಮಾತು. ಪಟ್ಟಣ ಠಾಣೆಯಲ್ಲಿ ಓರ್ವ ವೃತ್ತನಿರೀಕ್ಷಕ, ಇಬ್ಬರು ಸಬ್ ಇನ್ಸ್‌ಪೆಕ್ಟರ್, ೧೧ ಹೆಡ್‌ಕಾನ್ಸ್‌ಸ್ಟೇಬಲ್, ೨೭ ಪೊಲೀಸರು ಇರಬೇಕು. ಈ ಸಿಬ್ಬಂದಿಯಲ್ಲಿ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಭರ್ತಿಯಾಗಿದ್ದರೆ ೧೧ ಹೆಡ್‌ಕಾನ್ಸ್‌ಟೇಬಲ್ ಪೈಕಿ ಇಬ್ಬರು ಅನ್ಯ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ರಾತ್ರಿ ಹಗಲು ಓರ್ವ ಠಾಣೆಯ ಮುಖ್ಯಸ್ಥರಾಗಿ ಕೆಲಸ, ೧೧೨ ವಾಹನ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಿದೆ. ಇನ್ನು ೨೭ ಪೊಲೀಸರ ಪೈಕಿ ಐವರು ಪೊಲೀಸ್ ಸಿಬ್ಬಂದಿಯ ಕೊರತೆ ಇದ್ದರೆ ಉಳಿದ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಹೋಗುವುದು, ನ್ಯಾಯಾಲಯದ ಸಮನ್ಸ್ ಜಾರಿಗೊಳಿಸುವುದು, ಅಪರಾಧಿಗಳ ಜಾಡುಬೆನ್ನೆತ್ತುವ ಕೆಲಸ, ಠಾಣೆಯಲ್ಲಿ ಸೆಂಟ್ರಿ ಕೆಲಸ, ಬರವಣಿಗೆ, ವಿಚಾರಣೆ, ಕಂಪ್ಯೂಟರ್ ಆಪರೇಟಿಂಗ್, ವಾಹನಗಳ ಗಸ್ತು ಕೆಲಸವನ್ನು ರಾತ್ರಿ ಹಗಲು ನಿರ್ವಹಿಸಬೇಕಿದೆ. ಇದರಿಂದಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಸಿಬ್ಬಂದಿ ಕೊರತೆ ಇದ್ದು, ಓಬಿರಾಯನ ಕಾಲದ ಸಿಬ್ಬಂದಿಯ ಲೆಕ್ಕವೇ ಇಂದಿಗೂ ಮುಂದುವರಿದರೆ ಅಭಿವೃದ್ಧಿಗೊಳ್ಳುತ್ತಿರುವ ಪಟ್ಟಣದ ಟ್ರಾಫಿಕ್ ನಿಯಂತ್ರಣ ಮಾಡುವುದು ಹೇಗೆ? ಕನಿಷ್ಠ ಇಂದಿನ ಕೆಲಸದ ಒತ್ತಡಕ್ಕೆ ಕನಿಷ್ಠ ೧೦ ಕ್ಕೂಹೆಚ್ಚಿನ ಅಧಿಕ ಸಿಬ್ಬಂದಿಯನ್ನು ಠಾಣೆಗೆ ನಿಯೋಜಿಸಿದರೆ ಸಾರ್ವಜನಿಕರ ಅನಿಸಿಕೆ ತಕ್ಕಂತೆ ಕೆಲಸ ಮಾಡಬಹುದು ಎಂಬುದು ಅಧಿಕಾರಿಯ ಮಾತು. ಮಾತು ತಪ್ಪಿದ ಹಿರಿಯ ಅಧಿಕಾರಿಗಳು:
ಪಟ್ಟಣದಲ್ಲಿ ಹೆಚ್ಚಿರುವ ವಾಹನಗಳ ಸಂಖ್ಯೆಗೆ ತಕ್ಕಂತೆ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಾಗಿದೆ. ಪರಿಣಾಮ ಹೆದ್ದಾರಿಯ ಒಂದು ಬದಿಯಲ್ಲಿ ಒಂದು ವಾಹನದ ನಂತರ ಮತ್ತೊಂದು ವಾಹನ ನಿಲುಗಡೆ ಮಾಡುವುದರಿಂದಾಗಿ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ, ಹಳೇ ತಾಲೂಕು ಕಚೇರಿ ಕಟ್ಟಡ ಇದ್ದ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಮೊದಲ ಬಂದವರಿಗೆ ಆದ್ಯತೆ ಎಂಬಂತಾಗಿದೆ. ಹೆದ್ದಾರಿಯಲ್ಲಿ ನಿಲುಗಡೆಗೆ ಮನವಿ:
೨೦೧೨ಕ್ಕೂ ಮುನ್ನ ಹೆದ್ದಾರಿಯ ಎರಡು ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿದ್ದು ಎರಡು ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಬೇರೆಯಡೆ ನಿಲುಗಡೆ ಪ್ರದೇಶ ಗುರುತಿಸಿದ್ದ ಅಂದಿನ ಪೊಲೀಸ್ ವ್ಯವಸ್ಥೆ ಮಾಡಿದ್ದು ಪ್ರತಿ ದಿನ ಒಂದೊಂದು ಬದಿಯಲ್ಲಿ ವಾಹನ ನಿಲುಗಡೆ ಮಾಡಲಾಗುತಿತ್ತು. ಇದರಿಂದಾಗಿ ಸಾಕಷ್ಟು ವಾಹನ ದಟ್ಟಣೆ ನಿಯಂತ್ರಣಕ್ಕೆ ಬಂದಿತ್ತು. ಆದರೆ, ೨೦೧೨ ಪಟ್ಟಣದ ಮುಖ್ಯ ಬೀದಿಯಲ್ಲಿ ನಡೆದ ಅಪಘಾತದಿಂದ ಸಂಭವಿಸಿದ ಗಲಭೆಯಿಂದಾಗಿ ಜಿಲ್ಲಾಧಿಕಾರಿಗಳು ಹೆದ್ದಾರಿಯಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಿದ್ದರು. ಇದರಿಂದಾಗಿ ಹಲವು ವರ್ಷಗಳ ಕಾಲ ಹೆದ್ದಾರಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿತ್ತು. ಕ್ರಮೇಣ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಆದರೆ, ನಿಯಮಬದ್ಧವಾಗಿ ವಾಹನ ನಿಲುಗಡೆ ಮಾಡಿ ಎಂದು ಪೊಲೀಸರಿಗೆ ಮನವಿ ಮಾಡಿದರೆ ಜಿಲ್ಲಾಧಿಕಾರಿ ಆದೇಶ ಇರುವ ಕಾರಣ ವಾಹನ ನಿಲುಗಡೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಸ್ಪಷ್ಟನೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವಂತೆ ಇತ್ತೀಚಿಗೆ ಪಟ್ಟಣಕ್ಕೆ ಭೇಟಿ ನೀಡಿದ್ದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರಿಗೆ ಸಾರ್ವಜನಿಕರು ಮನವಿ ಮಾಡಿದ್ದರು. ಆದರೆ ಮನವಿ ಮಾಡಿ ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಬದಲಾವಣೆಯಾಗಿಲ್ಲ. ವಾಹನಗಳ ನಿಲುಗಡೆಗೆ ಬೇಕಿದೆ ಸ್ಥಳ:ಹೆದ್ದಾರಿಯಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಾಗುವುದರಿಂದ ಹೆಚ್ಚಿನ ವಾಹನಗಳ ನಿಲುಗಡೆ ಸಾಧ್ಯವಿಲ್ಲ. ಹಳೇ ಕಂದಾಯ ಇಲಾಖೆಯ ಕಟ್ಟಡ ಇದ್ದ ಸ್ಥಳದಲ್ಲಿ ಮೊದಲು ಬಂದವರಿಗೆ ಅವಕಾಶವಿದೆ. ಇನ್ನೂ ಪುರಸಭೆ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ನಿಷೇಧ ಹೇರಲಾಗಿದೆ. ಪರಿಣಾಮ ತಾಪಂ ಹಾಗೂ ಕಂದಾಯ ಇಲಾಖೆಗೆ ತೆರಳುವ ಕಿರಿದಾದ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ, ಎಸ್‌ಬಿಐ ಬ್ಯಾಂಕ್ ಸಮೀಪದ ವೃತ್ತ ನಿರೀಕ್ಷಕರ ನಿವಾಸ ಇದ್ದ ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಿದರೆ ಸಾಕಷ್ಟು ವಾಹನ ದಟ್ಟಣೆ ನಿಯಂತ್ರಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
====ಹೇಳಿಕೆ1
ಹೆದ್ದಾರಿಯಲ್ಲಿ ವ್ಯವಸ್ಥಿತವಾಗಿ ವಾಹನ ನಿಲುಗಡೆ ಮಾಡಲು ಸಾಧ್ಯವಿಲ್ಲ. ಇಲ್ಲಿ ಬೇನಾಮಿಯಾಗಿ ವಾಹನ ಸವಾರರು ವಾಹನ ನಿಲುಗಡೆ ಮಾಡುತಿದ್ದಾರೆ. ವಾಹನ ನಿಷೇದ ತೆರವುಗೊಳಿಸಿದರೆ ಇಲಾಖೆ ವಾಹನ ನಿಲುಗಡೆ ಕ್ರಮ ಕೈಗೊಳ್ಳಲಿದೆ.ಪ್ರಮೋದ ಕುಮಾರ್, ಡಿವೈಎಸ್ಪಿ ಸಕಲೇಶಪುರ ಉಪವಿಭಾಗ
ಹೇಳಿಕೆ2ಹೆದ್ದಾರಿಯಲ್ಲಿ ವಾಹನ ನಿಲುಗಡೆ ಇರುವ ನಿಷೇಧವನ್ನು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ತೆರವುಗೊಳಿಸಲಾಗುವುದು.
ಸಿಮೆಂಟ್ ಮಂಜು,ಶಾಸಕ