ಏಕತೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ನಾಶ: ಟಿ.ಕೆ.ತ್ಯಾಗರಾಜ್ ಕಳವಳ

KannadaprabhaNewsNetwork |  
Published : Sep 28, 2026, 01:15 AM IST
 | Kannada Prabha

ಸಾರಾಂಶ

ನಮ್ಮ ಸಾಮಾಜಿಕ ವ್ಯವಸ್ಥೆ ಇಂದು ಕೆಟ್ಟ ಪರಿಸ್ಥಿತಿಗೆ ಬಂದು ತಲುಪಿದೆ. ರಾಜಕೀಯ ವ್ಯವಸ್ಥೆಯಿಂದ ಸಾಂಸ್ಕೃತಿಕ ಜಗತ್ತು ಹಾಳಾಗುತ್ತಿದೆ. ಪ್ರತಿ ರಾಜ್ಯದ ಸಂಸ್ಕೃತಿಯೂ ವಿಭಿನ್ನವಾಗಿದ್ದು, ಅಲ್ಲಿನ ಸಂಸ್ಕೃತಿಯನ್ನು ನಾವು ಗೌರವಿಸಬೇಕು. ನಾವು ಬದುಕುತ್ತಿರುವುದು ಒಕ್ಕೂಟ ವ್ಯವಸ್ಥೆಯ ಸರ್ಕಾರದಲ್ಲಿ. ಎಲ್ಲರ ಆಹಾರ, ಆಚಾರ ವಿಚಾರ, ಭಾಷೆ, ನಡೆ-ನುಡಿ, ಸಂಸ್ಕೃತಿ ಇವೆಲ್ಲವನ್ನೂ ಗೌರವಿಸಬೇಕು. ಅದು ಬಿಟ್ಟು ಏಕತೆಯ ಹೆಸರಿನಲ್ಲಿ ಹಿಂದಿ ಹೇರುವ ವ್ಯವಸ್ಥೆಗೆ ನಾವು ವಿರೋಧ ವ್ಯಕ್ತಪಡಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ, ತುಮಕೂರು

ಭಾರತದಲ್ಲಿ ಬಹುತ್ವದ ಪರಂಪರೆ ಇದೆ. ಆದರೆ ಏಕತೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸಲಾಗುತ್ತಿದೆ ಎಂದು ಹಿರಿಯ ವಿಮರ್ಶಕ, ಕಥೆಗಾರ ಟಿ.ಕೆ.ತ್ಯಾಗರಾಜ್ ಕಳವಳ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಬಹುಮುಖಿ ಬಳಗ, ಅಪೂರ್ವ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿವೇಕಾ ಕೆ.ವಿ. ಅವರ ಬಿಸಿರೊಟ್ಟಿ ಮತ್ತು ಇತರೆ ಕಥೆಗಳು ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಬಹುತ್ವ ಭಾರತದಲ್ಲಿ ಇರುವ ಎಲ್ಲ ರಾಜ್ಯಗಳು ಒಂದೊಂದು ದೇಶ ಇದ್ದಂತೆ. ಆ ರಾಜ್ಯಗಳಿಗೆ ತನ್ನದೇ ಆದ ಸಂಸ್ಕೃತಿ, ಸಾಹಿತ್ಯದ ಕುರುಹುಗಳಿವೆ. ಭಾಷೆ ಸಾಹಿತ್ಯದ ಮೆರುಗು ಇದೆ. ಆದರೆ ಏಕತೆಯ ಹೆಸರಿನಲ್ಲಿ ಈ ಎಲ್ಲ ಬಹುತ್ವವನ್ನೂ ನಾಶಗೊಳಿಸುವ ಅಪಾಯ ನಮ್ಮೆದುರಿಗಿದೆ. ಇದು ಸಾಹಿತ್ಯ ವಲಯಕ್ಕೂ ಅನ್ವಯಿಸುತ್ತದೆ. ರೋಗಗ್ರಸ್ಥ, ಸಂಕುಚಿತ ಮನಸ್ಸುಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ಎಂದು ಹೇಳಿದರು.

ನಮ್ಮ ಸಾಮಾಜಿಕ ವ್ಯವಸ್ಥೆ ಇಂದು ಕೆಟ್ಟ ಪರಿಸ್ಥಿತಿಗೆ ಬಂದು ತಲುಪಿದೆ. ರಾಜಕೀಯ ವ್ಯವಸ್ಥೆಯಿಂದ ಸಾಂಸ್ಕೃತಿಕ ಜಗತ್ತು ಹಾಳಾಗುತ್ತಿದೆ. ಪ್ರತಿ ರಾಜ್ಯದ ಸಂಸ್ಕೃತಿಯೂ ವಿಭಿನ್ನವಾಗಿದ್ದು, ಅಲ್ಲಿನ ಸಂಸ್ಕೃತಿಯನ್ನು ನಾವು ಗೌರವಿಸಬೇಕು. ನಾವು ಬದುಕುತ್ತಿರುವುದು ಒಕ್ಕೂಟ ವ್ಯವಸ್ಥೆಯ ಸರ್ಕಾರದಲ್ಲಿ. ಎಲ್ಲರ ಆಹಾರ, ಆಚಾರ ವಿಚಾರ, ಭಾಷೆ, ನಡೆ-ನುಡಿ, ಸಂಸ್ಕೃತಿ ಇವೆಲ್ಲವನ್ನೂ ಗೌರವಿಸಬೇಕು. ಅದು ಬಿಟ್ಟು ಏಕತೆಯ ಹೆಸರಿನಲ್ಲಿ ಹಿಂದಿ ಹೇರುವ ವ್ಯವಸ್ಥೆಗೆ ನಾವು ವಿರೋಧ ವ್ಯಕ್ತಪಡಿಸಬೇಕು ಎಂದರು.

ಇಂದಿನ ನಮ್ಮ ಸಾಮಾಜಿಕ ವ್ಯವಸ್ಥೆಯ ಮೇಲೆ ಟಿ.ವಿ. ಚಾನಲ್‌ಗಳು ದುಷ್ಪರಿಣಾಮ ಬೀರುತ್ತಿವೆ. ಗಂಡ ಹೆಂಡತಿ ಸಂಬಂಧಗಳನ್ನು ವೈಭವೀಕರಿಸುತ್ತಿವೆ. ಒಂದು ಕಡೆ ಈ ದೃಶ್ಯ ಮಾಧ್ಯಮಗಳು, ಮತ್ತೊಂದು ಕಡೆ ಕೆಟ್ಟ ರಾಜಕೀಯ ವ್ಯವಸ್ಥೆ ಇದೆಲ್ಲದ್ದರಿಂದಾಗಿ ಒಳ್ಳೆಯ ಮನಸ್ಸುಗಳು ಕಲುಷಿತಗೊಳ್ಳುವ ಅಪಾಯದ ಅಂಚಿಗೆ ಬಂದು ತಲುಪಿದ್ದೇವೆ ಎಂದು ವಿಶ್ಲೇಷಿಸಿದರು.

ನಮ್ಮ ಸಮಾಜದಲ್ಲಿ ಮಹಿಳೆಯರ ಬಗ್ಗೆ ನಕಾರಾತ್ಮಕ ಧೋರಣೆಯೇ ಹೆಚ್ಚು. ಇಂತಹ ಸಂದರ್ಭದಲ್ಲಿ ವಿವೇಕ ಅವರ ಬರವಣಿಗೆಗೆ ಪತಿ ವೀರಣ್ಣಗೌಡ ಅವರು ಸಾಥ್ ನೀಡುತ್ತಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಥೆಗಾರ್ತಿ ಡಾ.ಕೆ.ಷರೀಫ ಅವರು ಮಾತನಾಡಿ ಮಹಿಳಾ ಬರಹಗಾರರು ಇಂದು ಅಡುಗೆ ಮನೆಯನ್ನು ದಾಟಿ ಹೊರ ಬಂದಿದ್ದಾರೆ. ಮಹಿಳೆಯರ ಬದುಕು ವಿಸ್ತಾರಗೊಂಡಿದೆ. ಸಂಸಾರ ನಡೆಸುತ್ತಲೇ ಬರವಣಿಗೆಯಲ್ಲಿ ತೊಡಗಿಕೊಳ್ಳುವುದು, ಸಾಹಿತ್ಯ ಕೃಷಿ ಮಾಡುವುದು ಅತ್ಯಂತ ದೊಡ್ಡ ಸಾಧನೆ ಎಂದೇ ಹೇಳಬಹುದು. ಇತ್ತೀಚಿನ ಮಹಿಳಾ ಬರಹಗಾರರು ಹೊಸ ಹೊಸ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ನಮ್ಮ ಸಮಾಜದಲ್ಲಿ ಕೆಲವು ಲಕ್ಷ್ಮಣ ರೇಖೆಗಳಿವೆ. ಆ ರೇಖೆಗಳನ್ನು ದಾಟಿ ಬರೆಯುವುದು ದೊಡ್ಡ ಸಾಧನೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಬರಹಗಾರ್ತಿಯರು ಸಮಾಜಮುಖಿಯಾಗಿ ತೊಡಗಿಕೊಂಡಿದ್ದಾರೆ. ಸಮಾಜದಲ್ಲಿ ಸ್ತ್ರೀ ವಾದಿ ಚಳವಳಿಯ ಪ್ರಭಾವ ಇನ್ನೂ ಇದೆ. ಬರವಣಿಗೆಯ ಹಿಂದೆ ಉದ್ದೇಶ ಇರಬೇಕು. ಒಂದು ಸಮಾಧಾನಕ್ಕಾದರೆ ಮತ್ತೊಂದು ಈ ಸಮಾಜದ ಋಣ ನನ್ನ ಮೇಲಿದೆ ಎಂದು ತಿಳಿಯಬೇಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯಬೇಕು ಎಂದು ಹೇಳಿದರು.ಜನ್ ಜೀಗಳ ಹೋರಾಟ ಈಗ ಪ್ರಬಲವಾಗಿದೆ. ಅವರ ಹೋರಾಟಕ್ಕೆ ದನಿಗೂಡಿಸಬೇಕಾಗಿದೆ. ಬರವಣಿಗೆಯ ಜೊತೆ ಸಮಾಜದ ಚಿಂತನೆಯೂ ಇರಬೇಕು ಎಂದ ಅವರು, ಬರೆಯುತ್ತಾ ಹೋದಂತೆ ಗಟ್ಟಿ ಬರಹಗಳು ಬರಲು ಸಾಧ್ಯವೇ ಹೊರತು, ಮೌನವಾಗಿ ಕುಳಿತರೆ ಬರವಣಿಗೆ ಸಾಧ್ಯವಾಗದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹಿರಿಯ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿದರು. ಕಥೆಗಾರ ಡಾ. ರವಿಕುಮಾರ್ ನೀಹ ವಿವೇಕ ಅವರ ಕಥಾ ಸಂಕಲನ ಪರಿಚಯಿಸಿದರು. ಮಂಡ್ಯದ ಯುವ ಬರಹಗಾರರ ಸಂಘದ ಅಧ್ಯಕ್ಷ ಸತೀಶ್ ಟಿ.ಜವರೇಗೌಡ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾ ಬಗ್ಗನಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಇತರರು ಮಾತನಾಡಿದರು. ಕವಯತ್ರಿ ರಂಗಮ್ಮ ಹೊದೇಕಲ್, ಕಥೆಗಾರ್ತಿ ವಿವೇಕ ಕೆ.ವಿ., ಹಡವನಹಳ್ಳಿ ವೀರಣ್ಣಗೌಡ, ಮಂಜುನಾಥ್ ದಂಡಿನಶಿವರ, ಚಂದ್ರಶೇಖರ್ ನಿರಂತರ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್