ಕನ್ನಡಪ್ರಭ ವಾರ್ತೆ ಯಾದಗಿರಿ
ಕಳೆದ ಆರು ತಿಂಗಳಿಂದ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಕಳ್ಳತನ, ಮಟ್ಕಾ- ಜೂಜು ಕ್ಲಬ್‌ಗಳು, ಕಳ್ಳಬಟ್ಟಿ ಸಾರಾಯಿ ದಂಧೆಯಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇವುಗಳನ್ನು ತಡೆಯಬೇಕಾದ ಪೊಲೀಸರೇ ಇದಕ್ಕೆ ಬೆನ್ನೆಲುಬಾಗಿ ನಿಂತಿರೋದು ದುರದೃಷ್ಟಕರ.ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ನೇತೃತ್ವದಲ್ಲಿ, ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಮುಂದುವರೆದ ಕೆಡಿಪಿ ಸಭೆಯಲ್ಲಿ ಇಂತಹ ಗಂಭೀರ ಪ್ರಕರಣಗಳ ಬಗ್ಗೆ ಗಮನ ಸೆಳೆದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹಾಗೂ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಗೌಡ ತುನ್ನೂರು, ಜಿಲ್ಲೆಯಲ್ಲಿನ ಅವ್ಯವಸ್ಥೆ ಬಗ್ಗೆ ಕಿಡಿ ಕಾರಿದರು.
ಜಿಲ್ಲೆಯಲ್ಲಿ ಹಾಡುಹಗಲೇ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಯಡ್ಡಳ್ಳಿಯಲ್ಲಿ ಸ್ವಾಮೀಜಿಯೊಬ್ಬರ ಮನೆ ದೋಚಲಾಗಿದೆ, ಚೈನ್ ಕಳ್ಳತನ, ಅಮಾಯಕರ ತಡೆದು ದರೋಡಿ, ಮಟ್ಕಾ- ಜೂಜು ಕ್ಲಬ್‌ಗಳ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಶಾಸಕ ಶರಣಗೌಡ ಕಂದಕೂರು, ಹೈವೇ ಪ್ಯಾಟ್ರೋಲ್ ಅನ್ನೋದು ಅಮಾಯಕ ಬಡ ಜನರನ್ನು ವಸೂಲು ಮಾಡುತ್ತಿರುವಂತಿದೆ. ಇದೇ ರೀತಿ ಎಲ್ಲಾದರೂ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಜಾಗೆಗೆ ನಿಂತಿದ್ದರೆ ಅದಕ್ಕಾದರೂ ಕಡಿವಾಣ ಹಾಕಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನ ಕ್ಯಾಕರಿಸಿ ನಮ್ಮ ಮುಖಕ್ಕೆ ಉಗಿಯುತ್ತಾರೆ:
ಯಾದಗಿರಿ ನಗರದ ಜನ ಬೆಳಗ್ಗಿನ ವಾಕಿಂಗ್ ಹೋಗಲು ಹೆದರುತ್ತಿದ್ದಾರೆ. ನಿಮಗೆ ಯಾರೂ ಏನೂ ಅನ್ನೋಲ್ಲ, ಮನೆಯಲ್ಲಿ ಚಹಾ ಕುಡಿಯುತ್ತ ಕುಳಿತು ಕ್ಯಾಕರಿಸಿ ನಮ್ಮ ಮುಖಕ್ಕೆ ಉಗಿಯುತ್ತಾರೆ. ಈ ಅಕ್ರಮಗಳ ಹಿಂದೆ ಪೊಲೀಸರೇ ಕಾವಲಾಗಿದ್ದಾರೆ. ಇದನ್ನು ತಡೆಗಟ್ಟದೇ ಹೋದರೆ ಮುಂದಿನ ದಿನಗಳಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ. ಪೊಲೀಸ್ ಸ್ಟೇಷನ್ ಮುಂದೆ ಕೋಡೂದು ನಮಗೇನೂ ಹೊಸದಲ್ಲ ಎಂದು ಕಿಡಿ ಕಾರಿದರು.ಫೆ.12ರಂದು ವಿಧಾನಸಭೆ ಅಧಿವೇಶನ ನಡೆಯಲಿದೆ. ಈ ಕುರಿತು ತಮ್ಮಲ್ಲಿ ಫೋಟೋ ವೀಡಿಯೋ ಸಮೇತ ದಾಖಲೆಗಳಿವೆ, ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಅಧಿವೇಶನದಲ್ಲಿ ಸ್ಪೀಕರ್ ಎದುರು ಧರಣಿ ಕೂಡಬೇಕಾದೀತು ಎಂದು ಶಾಸಕ ಕಂದಕೂರು ಎಚ್ಚರಿಸಿದರು.
ನೀರಿನಲ್ಲಿ ಪೌಡರ್ ಕಲಿಸಿ ಸೇಂದಿ ಮಾರಾಟ!ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಹಾಗೂ ತೆಲಂಗಾಣ ಗಡಿಭಾಗದ ಮೂಲಕ ಸಾರಾಯಿ- ಕೈಸೇಂದಿ ದಂಧೆ ವ್ಯಾಪಕವಾಗಿ ನಡೆದಿರುವ ಬಗ್ಗೆ ಶಾಸಕರುಗಳು ದೂರಿದರು. ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಜಾಸ್ತಿಯಾಗಿದೆ. ಗುರುಮಠಕಲ್ ಮತಕ್ಷೇತ್ರಕ್ಕೆ ಅಕ್ರಮ ಮದ್ಯ ತೆಲಂಗಾಣದಿಂದ ಬರುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರು, ಇದಕ್ಕೆ ಕ್ರಮ ಕೈಗೊಳ್ಳುವಂತೆ ದೂರಿದರೆ.
ಅಲ್ಲಿ ಯಾಕೆ, ಇಲ್ಲೇ ಯಾದಗಿರಿ ನಗರದಲ್ಲೇ ಪೌಡರ್ ಕಲಿಸಿ ಸೇಂದಿ ಕಳ್ಳಬಟ್ಟಿ ತಯಾರಿಸಲಾಗುತ್ತಿದೆ ಇದು ಅಬಕಾರಿ ಇಲಾಖೆಗಳಿಗೆ ಗೊತ್ತಿರುವ ವಿಚಾರವಾದರೂ ತಡೆಗಟ್ಟುವುದಿಲ್ಲ ಎಂದು ದೂರಿದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.