ಕಾಂಗ್ರೆಸ್‌ ಕಿತ್ತೊಗೆಯಲು ಸಂಕಲ್ಪ: ವಿಜಯೇಂದ್ರ

KannadaprabhaNewsNetwork | Published : Apr 16, 2025 12:31 AM

ಸಾರಾಂಶ

ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಜನವಿರೋಧಿ ಕಾಂಗ್ರೆಸ್‌ ಸರ್ಕಾರ ಐವತ್ತು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಜನವಿರೋಧಿ ಕಾಂಗ್ರೆಸ್‌ ಸರ್ಕಾರ ಐವತ್ತು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ನಿಪ್ಪಾಣಿಗೆ ಆಗಮಿಸಿ 100 ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಮುನ್ಸಿಪಲ್ ಹೈಸ್ಕೂಲ್ ಗ್ರೌಂಡ್‌ನಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಭೀಮ ಹೆಜ್ಜೆ ಯಾತ್ರೆ-100 ಸಮಾರೋಪ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಜನರ ಹಣ ದುರುಪಯೋಗ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ರಾಜ್ಯದಿಂದ ಬುಡ ಸಹಿತ ಕಿತ್ತು ಹಾಕಿ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ವಂತ ಶಕ್ತಿ ಮೇಲೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ‌ ಎಂದು ಅವರು ಕರೆ ನೀಡಿದರು.

ದೇಶದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌ ಡಾ.ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಆ ಕೆಲಸವನ್ನು ಬಿಜೆಪಿ ಮಾಡಿದೆ. ಲೋಕಸಭೆ ಪ್ರವೇಶ ತಡೆಯಲು ಡಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು. ಕಾಂಗ್ರೆಸ್ಸಿಗರು ಅಂಬೇಡ್ಕರ್ ಜಪ ಮಾಡುವುದು ಕೇವಲ ಮತಗಳಿಗಾಗಿ. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಅಂಬೇಡ್ಕರ್‌ಗಾಗಿ ಏನು ಮಾಡಿದ್ದಾರೆ ಎಂದು ವಿಜಯೇಂದ್ರ ಪ್ರಶ್ನಿಸಿದರು.

ದಲಿತರ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗಿದೆ. ರಾಜ್ಯದಲ್ಲಿ ಹಣದುಬ್ಬರ ಹೆಚ್ಚುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರ ವಿರುದ್ಧವೇ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುತ್ತಿದೆ ಎಂದು ತಿಳಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ ಮಾತನಾಡಿ, ನಾವು ದಲಿತ ಪರ ಎನ್ನುವ ಕಾಂಗ್ರೆಸ್ಸಿನವರು ಜಾತಿ ಸಮೀಕ್ಷೆ ಮಾಡಿದ್ದಾರೆ. ಅದರಲ್ಲಿ ಮುಸ್ಲಿಮರನ್ನು ನಂ.1 ಸ್ಥಾನದಲ್ಲಿ ತೋರಿಸಲಾಗಿದೆ. ದಲಿತರು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ಹೇಳಬೇಕು. ದಲಿತರ ಅನುದಾನ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ 600 ಅಡಿ ಪ್ರತಿಮೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅಂಬೇಡ್ಕರ್ ಅವರಿಗೆ ದೆಹಲಿಯಲ್ಲಿ ಆರಡಿ ಜಾಗ ಯಾಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು. ವೀರಸಾವರ್ಕರ್ ಅಂಬೇಡ್ಕರ್ ಸೋಲಿಗೆ ಕಾರಣ ಎಂದು ಹೇಳಿದ ಸಿದ್ದರಾಮಯ್ಯನವರೇ ನಿಮ್ಮ ಕುಟುಂಬದವರು ಯಾರು ಹೋಗಿ ಅಲ್ಲಿ ಸಮೀಕ್ಷೆ ಮಾಡಿದೀರಿ ಹೇಳಿ? ಅಂಬೇಡ್ಕರ್ ನಮ್ಮ ಮನೆ ದೇವರು ಎಂದು ಹೇಳಿದ್ದೀರಿ. ಅಂಬೇಡ್ಕರ್ ಅವರಿಗೆ ಯಾಕೆ ಭಾರತ ರತ್ನ ಕೊಡಲಿಲ್ಲ‌ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಎನ್.ಮಹೇಶ್, ಶಾಸಕಿ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share this article