ಹಾವೇರಿ: ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಆದ್ಯ ವಚನಕಾರ ದೇವರದಾಸಿಮಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಹಸೀಲ್ದಾರ್ ಕೆ. ಶರಣಮ್ಮ ತಿಳಿಸಿದರು.ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇವರ ದಾಸಿಮಯ್ಯನವರು ವಚನಕಾರರಲ್ಲಿಯೇ ಮೊದಲಿಗರು. 12ನೇ ಶತಮಾನದಲ್ಲಿ ಧಾರ್ಮಿಕತೆಯ ಸೃಷ್ಟಿಗೆ ಅದ್ಭುತವಾದ ಕಾಲವಾಗಿತ್ತು. ಇಂದಿನ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜತೆಗೆ ವಚನ ಗ್ರಂಥಗಳ ಕಲಿಕೆಗೆ ಪ್ರೋತ್ಸಾಹಿಸಬೇಕು. ಇದು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅವರು ಸನ್ಮಾರ್ಗದಲ್ಲಿ ನಡೆಯಲು ಸಹಾಯಕಾರಿಯಾಗಿದೆ ಎಂದರು.ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವನಾಥ್ ಬೊಂದಾಡೆ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ್ ಕೆಲಗಾರ, ಜಿಲ್ಲಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಹಾವೇರಿ ನಗರ ದೇವಾಂಗ ಸಮಾಜದ ಗೌರವಾಧ್ಯಕ್ಷ ಡಿ.ಆರ್. ಕುದರಿ, ಹಾವೇರಿ ನಗರ ದೇವಾಂಗ ಸಮಾಜದ ಅಧ್ಯಕ್ಷ ಸೋಮನಾಥ ಕುದರಿ, ಹಾವೇರಿ ಬನಶಂಕರಿದೇವಿ ಸಮುದಾಯ ಭವನದ ಅಧ್ಯಕ್ಷ ವೆಂಕಟೇಶ ಕುದರಿ, ಹಾವೇರಿ ತಾಲೂಕು ದೇವಾಂಗ ಸಂಘದ ಅಧ್ಯಕ್ಷ ಚಿದಂಬರ ಕುದರಿ, ಹಾವೇರಿ ನೇಕಾರ ಸಮುದಾಯಗಳ ಒಕ್ಕೂಟದ ನಿರ್ದೇಶಕ ಮಹೇಶ ಕುದರಿ, ದ್ಯಾಮಪ್ಪ ಸುಂಕಾಪುರ, ದೇವರಾಜ ಸಾಲಿ, ಬನಶಂಕರಿದೇವಿ ದೇವಸ್ಥಾನದ ಅರ್ಚಕ ಮುಸಂಗಸ್ವಾಮಿ ದೇವಾಂಗಮಠ ಸೇರಿದಂತೆ ಸಮುದಾಯಗಳ ಮುಖಂಡರು ಇದ್ದರು.ದೇವರ ದಾಸೀಮಯ್ಯ ನುಡಿದಂತೆ ನಡೆದ ವಚನಕಾರ
ಹಾನಗಲ್ಲ: ಆದ್ಯ ವಚನಕಾರ ದೇವರದಾಸೀಮಯ್ಯ ಮಾನವೀಯ ಮೌಲ್ಯ ಹಾಗೂ ಆಧ್ಯಾತ್ಮಿಕ ಉನ್ನತಿಗಳೆರಡನ್ನೂ ಅನುಸರಿಸಿ ನಡೆದು, ವಚನಗಳಲ್ಲಿ ಅವನ್ನೇ ಬರೆದು ಎಲ್ಲರ ಗೌರವಕ್ಕೆ ಪಾತ್ರರಾದ ವಚನಕಾರ ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.ಬುಧವಾರ ಪಟ್ಟಣದ ತಾಲೂಕು ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ದೇವರ ದಾಸೀಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದೇವರ ದಾಸೀಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕಪಟತನದ ವಿಮೋಚನೆ, ಆತ್ಮಪ್ರಶಂಸೆಯ ಅತಿರೇಕಗಳಿಂದ ದೂರವಿದ್ದು ಸಮಾಜಕ್ಕೆ ಹಿತವಾಗುವ ಬದುಕು ನಮ್ಮದಾಗಬೇಕು. ಹಿತ ನುಡಿಗಳಿರಬೇಕು. ಕಾಯಕದಲ್ಲಿ ಶ್ರದ್ಧೆ, ನುಡಿದಂತೆ ನಡೆ. ವಿನಯ ವಿಚಾರಗಳು ನಮ್ಮದಾಗಿರಬೇಕೆಂಬ ಸಂದೇಶವನ್ನು ಅವರು ಸಾರಿದ್ದಾರೆ. ನಿಸರ್ಗ ಪ್ರೀತಿ ದೇವರ ದಾಸೀಮಯ್ಯನವರ ವಚನಗಳಲ್ಲಿ ತುಂಬ ಸ್ವಾರಸ್ಯಕರವಾಗಿ ಮೂಡಿ ಬಂದಿವೆ ಎಂದರು.ಉಪನ್ಯಾಸ ನೀಡಿದ ಶಿಕ್ಷಕ ಮಂಜುನಾಥ ಹಾವೇರಿ, ದೇವರ ದಾಸೀಮಯ್ಯನವರ ಬದುಕು ಬರಹ ಒಂದೇ ಆಗಿತ್ತು. ಸಮಾಜಮುಖಿಯಾದ ಚಿಂತನೆಗಳ ಮೂಲಕ ನೇರ ನಿಷ್ಠುರವಾಗಿ ನುಡಿದ ಅವರು ಸಾರ್ವಕಾಲಿಕ ಸತ್ಯಗಳನ್ನು ತಿಳಿಸಿದ್ದಾರೆ. ಕೌಟುಂಬಿಕ ಸಾಮಾಜಿಕ ಸಾಮರಸ್ಯ ಅವರ ವಚನಗಳಲ್ಲಿ ಪ್ರಮುಖವಾಗಿವೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ಗಿರೀಶ ದೇಶಪಾಂಡೆ, ಶಂಕ್ರಣ್ಣ ಬೆಂಡೀಗೇರಿ, ಮಂಜುನಾಥ ಶೇಷಗಿರಿ, ಮನೋಹರ ಬನ್ನೂರ, ರಾಜಣ್ಣ ಬ್ಯಾಡಗಿ, ಬಸಣ್ಣ ಜಿಡ್ಡಿ, ಪುಷ್ಪಾ ಬ್ಯಾಡಗಿ, ಪ್ರೇಮಾ ಬೆಂಡಿಗೇರಿ, ಉಮಾ ಬನ್ನೂರ, ಮಹೇಶ ಬ್ಯಾಡಗಿ, ಚನ್ನಮ್ಮ ಜಿಡ್ಡಿ, ಬಸವರಾಜ ಬೆಂಡಿಗೇರಿ ಈ ಸಂದರ್ಭದಲ್ಲಿದ್ದರು. ಬಿ.ಎಸ್. ಪಾಟೀಲ ಸ್ವಾಗತಿಸಿದರು. ಶಿರಸ್ತೇದಾರ ಬಿ.ಎಸ್. ಅಂಗಡಿ ವಂದಿಸಿದರು.