ಗದಗ: ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದವರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ರಾಘವೇಂದ್ರ ಕೊಪ್ಪಳ ಮಾತನಾಡಿ, ದೇವರ ದಾಸಿಮಯ್ಯ ಅವರು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮುದನೂರು ಎಂಬ ಗ್ರಾಮದಲ್ಲಿ ಜನಿಸಿದರು. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದೇವಲ ಮಹರ್ಷಿಯರ ಅಚ್ಚುಮೆಚ್ಚು. ದೇವರ ದಾಸಿಮಯ್ಯನವರು ರಾಮನಾಥ ಸ್ವಾಮಿಯ ಆರಾಧಕರಾಗಿದ್ದು, ಅವರ ಅಂಕಿತನಾಮ ರಾಮನಾಥ ಎಂದು ಆಗಿತ್ತು ಎಂದು ಹೇಳಿದರು. ದಾಸಿಮಯ್ಯನವರ ಜೀವನ ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಹಾಜರಿದ್ದರು. ವೆಂಕಟೇಶ ಅಲ್ಕೋಂಡ ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಸ್ವಾಗತಿಸಿದರು.ದೇವರ ದಾಸಿಮಯ್ಯ ಪ್ರತಿಮೆಗೆ ಮಾಲಾರ್ಪಣೆ: ದೇವರ ದಾಸಿಮಯ್ಯ ಅವರ ಆದರ್ಶ ಬದುಕು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಶಿವಪ್ಪ ಮುಳಗುಂದ ಹೇಳಿದರು.
ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯ ಅವರ ಜಯಂತಿ ಅಂಗವಾಗಿ ಬುಧವಾರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಚೈತ್ರ ಶುದ್ಧ ಪಂಚಮಿಯಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರಿನ ರಾಮಯ್ಯ ಹಾಗೂ ಶಂಕರಿ ದಂಪತಿ ಪುತ್ರನಾಗಿ ದೇವರ ದಾಸಿಮಯ್ಯನವರು ಜನಿಸಿದರು. ಮುದನೂರಿನ ಸಮೀಪದ ಶೈವಕೇಂದ್ರವಾಗಿರುವ ಶ್ರೀಶೈಲದಲ್ಲಿ ಚಂದ್ರಗುಂಡ ಶಿವಾಚಾರ್ಯರ ಆಪ್ತ ಶಿಷ್ಯರಾಗಿ ಜ್ಞಾನ ಸಂಪಾದಿಸಿದರು. ದುಗ್ಗಳೆಯೊಂದಿಗೆ ಸಪ್ತಪದಿ ತುಳಿದು ಸಂಸಾರಿಕ ಜೀವನದೊಂದಿಗೆ ನೇಕಾರಿಕೆ ವೃತ್ತಿಯ ಮೂಲಕ ಸಾಕ್ಷಾತ್ ಶಿವನನ್ನು ಒಲಿಸಿಕೊಂಡು ಅವನಿಗೆ ಬಟ್ಟೆ ನೇಯ್ದು ಕೊಟ್ಟ ಹೆಗ್ಗಳಿಕೆ ಹೊಂದಿರುವ ಶ್ರೇಷ್ಠ ವಚನಕಾರರು ಎಂದರು.ರಾಮನಾಥ ಅಂಕಿತವನ್ನು ತಮ್ಮ ವಚನದಲ್ಲಿ ಬಳಸುವ ಮೂಲಕ ಅಸಂಖ್ಯಾತ ವಚನಗಳನ್ನು ಅವರು ರಚಿಸಿದ್ದಾರೆ, ಅವುಗಳ ಪೈಕಿ 150ಕ್ಕೂ ಹೆಚ್ಚು ವಚನಗಳು ಲಭ್ಯವಾಗಿರುವ ಬಗ್ಗೆ ಇತಿಹಾಸ ಉಲ್ಲೇಖಿಸುತ್ತದೆ. ಈ ಐತಿಹಾಸಿಕ ಸಾಧನೆಯ ಮೂಲಕ ವಚನ ಲೋಕದಲ್ಲಿಯೇ ವಿಖ್ಯಾತರಾಗಿದ್ದಾರೆ ಎಂದರು.ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ, ದೇವಾಂಗ ಸಮಾಜದ ಮುಖಂಡರಾದ ಅನಿಲ್ ಗಡ್ಡಿ, ಶಂಕರ ಕಾಕಿ, ಮಲ್ಲೇಶಿ ಬೆಲ್ಲದ, ಶ್ರೀನಿವಾಸ ಹುಬ್ಬಳ್ಳಿ, ದಶರಥ ಕೊಳ್ಳಿ, ರಾಮು ಬಾಲೇಹೊಸೂರ ಹಲವರಿದ್ದರು.