ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರಕವಿ ಕುವೆಂಪು ರಚಿಸಿದ ಸಾಹಿತ್ಯ ಪ್ರಕಾರಗಳಲ್ಲಿ ಪ್ರತಿಯೊಂದು ಸಾಲಿನಲ್ಲಿಯೂ ವೈಚಾರಿಕತೆ ಪ್ರಬಲವಾಗಿರುವುದನ್ನು ಕಾಣುತ್ತೇವೆ. ಪ್ರಕೃತಿ ಆರಾಧನೆ, ಕನ್ನಡ, ದೇಶಾಭಿಮಾನ ಸೇರಿದಂತೆ ವಿವಿಧ ಮಜಲುಗಳಲ್ಲಿ ವೈಚಾರಿಕತೆ ಇರುತ್ತದೆ. ಹಾಗಾಗಿಯೇ ಅವರೊಬ್ಬ ವಿಶ್ವ ಮಾನವ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.ನಗರದ ದೇವರಾಜ ಅರಸು ರಸ್ತೆಯಲ್ಲಿ ಮೈಸೂರು ಯುವ ವೇದಿಕೆ ವತಿಯಿಂದ ರಾಷ್ಟ್ರಕವಿ ಕುವೆಂಪು 121ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಕುವೆಂಪು ಅವರ ಜೀವನ ಚರಿತ್ರೆ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸಿ ನಂತರ ಸಿಹಿ ವಿತರಿಸಿ ಮಾತನಾಡಿದರು.ಕುವೆಂಪು ಅವರಿಂದ ನಾವು ವೈಚಾರಿಕತೆ, ಎಲ್ಲರೊಳಗೆ ಒಂದಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಚಾರಿಕತೆ ಕುವೆಂಪು ಅವರ ರಚಿಸಿದ ಸಾಹಿತ್ಯದಲ್ಲಿ ಮುಕುಟು ಪ್ರಾಯವಾಗಿದೆ. ಕುವೆಂಪು ಸಾಹಿತ್ಯ ಲೋಕದ ಮಹಾ ಪುರುಷ. ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಇಡೀ ದೇಶದಲ್ಲಿ ಕನ್ನಡ ಸಾಹಿತ್ಯದ ಶ್ರೇಷ್ಠತೆ ಗಮನಕ್ಕೆ ಬಂದಿತು ಎಂದರು.ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಸಾವಿರಾರು ವರ್ಷದ ಪ್ರಾಚೀನ ಚರಿತ್ರೆ ಮತ್ತು ಪರಂಪರೆ ಇದೆ. ವಿಶ್ವವಿಖ್ಯಾತ ತಜ್ಞರು, ಕವಿಗಳು, ಸಾಹಿತಿಗಳು, ವಿಜ್ಞಾನಿಗಳು ಅನೇಕ ಮಹಾಪುರುಷರು ಕನ್ನಡದ ಹೆಸರನ್ನು ವಿಶ್ವದ ಎಲ್ಲೆಡೆ ಪಸರಿಸಿದ್ದಾರೆ. ಅಲ್ಲದೆ ನಮ್ಮ ಜನಪದರು ಕನ್ನಡವನ್ನು ಜೀವಂತವಾಗಿ ಇಟ್ಟಿದ್ದಾರೆ. ಯಾವೊಂದು ಭಾಷೆಯ ಅನಿವಾರ್ಯತೆ ಇದ್ದರೂ ಕನ್ನಡ ಭಾಷೆ ನಮ್ಮ ಉಸಿರಾಗಿ, ಬದುಕಾಗಿ ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.ನಮ್ಮ ನಾಡಗೀತೆ ಹಾಗೂ ರೈತಗೀತೆ ರಚಿಸುವ ಮೂಲಕ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಮೆರುಗು ತಂದವರು ಕುವೆಂಪು. ಅವರು ಸಾಹಿತ್ಯ ಲೋಕದ ಮಹಾಪುರುಷ. ಅವರನ್ನು ಸದಾಕಾಲ ಕನ್ನಡಿಗರು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದರು.ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಸಂತ ಮನೀಶ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ. ಲಿಂಗರಾಜು, ವೇದಿಕೆ ಅಧ್ಯಕ್ಷ ಪ್ರಮೋದ್ ಗೌಡ, ಸಂಚಾಲಕ ಸಂದೇಶ್ ಪವಾರ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಎಂಡಿಎ ಮಾಜಿ ಸದಸ್ಯ ನವೀನ್ ಕುಮಾರ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್, ವಿಕ್ರಾಂತ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಸಿದ್ದೇಶ್, ಗುರುರಾಜ್, ಅಭಿ, ರವಿ, ಪ್ರಶಾಂತ್, ಮೋಹಿತ್, ವಿನಯ್, ರಾಜೇಶ್, ಉಮೇಶ್, ಶ್ರವಣ್, ಯಶವಂತ್, ನಂಜುಂಡಸ್ವಾಮಿ, ಮಂಜು, ವಿನೋದ್ ಅರಸ್, ಮಲ್ಲಿಕಾರ್ಜುನ್ ಇದ್ದರು.