ದೇವರಾಜ ಅರಸು ಕೆಲಸಗಳೇ ನಮಗೆ ಸ್ಫೂರ್ತಿ: ಸಿದ್ದರಾಮಯ್ಯ

KannadaprabhaNewsNetwork |  
Published : Jun 07, 2025, 12:49 AM ISTUpdated : Jun 07, 2025, 12:50 AM IST
Devaraj Urs 3 | Kannada Prabha

ಸಾರಾಂಶ

‘ದಿವಂಗತ ಡಿ.ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆಯಿಟ್ಟು ಮಾಡಿರುವ ಶೋಷಿತರ ಪರ ಕೆಲಸಗಳೇ ನಮಗೆ ಸ್ಫೂರ್ತಿ ಮತ್ತು ಪ್ರೇರಣೆ. ಅವರಿಂದ ಸ್ಫೂರ್ತಿ ಪಡೆದು ಸಾಮಾಜಿಕ ನ್ಯಾಯದೆಡೆಗೆ ದೃಢವಾದ ಹೆಜ್ಜೆ ಇರಿಸಿದ್ದೇವೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ದಿವಂಗತ ಡಿ.ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆಯಿಟ್ಟು ಮಾಡಿರುವ ಶೋಷಿತರ ಪರ ಕೆಲಸಗಳೇ ನಮಗೆ ಸ್ಫೂರ್ತಿ ಮತ್ತು ಪ್ರೇರಣೆ. ಅವರಿಂದ ಸ್ಫೂರ್ತಿ ಪಡೆದು ಸಾಮಾಜಿಕ ನ್ಯಾಯದೆಡೆಗೆ ದೃಢವಾದ ಹೆಜ್ಜೆ ಇರಿಸಿದ್ದೇವೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 43ನೇ ಪುಣ್ಯ ಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಅರಸು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಬಳಿಕ ಮಾತನಾಡಿದರು.

ಅರಸು ಅವರು ರಾಜಕೀಯದಲ್ಲಿ ಅವಕಾಶ ಸಿಗದ ಸಮುದಾಯದವರಿಗೆ ಪ್ರಾತಿನಿಧ್ಯ ದೊರಕಿಸಿಕೊಟ್ಟರು. ಅವರಿಂದಾಗಿ ಬಡತನ ನಿರ್ಮೂಲನಾ ಕಾರ್ಯಕ್ರಮ ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ ಜಾರಿಯಾಯಿತು. ಹಾವನೂರು ಆಯೋಗ ರಚಿಸಿ, ಆ ವರದಿ ಅನ್ವಯ ಉದ್ಯೋಗದಲ್ಲಿ ಮೀಸಲಾತಿ ಕೊಟ್ಟರು. ಉಳುವವನೇ ಭೂಮಿ ಒಡೆಯ ಕಾನೂನು ಜಾರಿ ಮಾಡಿ ಭೂರಹಿತರನ್ನು ಭೂ ಒಡೆಯರನ್ನಾಗಿಸಿದರು. ಜೀತ ಪದ್ಧತಿ ರದ್ದು ಮಾಡಿ, ಮಲ ಹೊರುವ ಪದ್ಧತಿ ನಿಲ್ಲಿಸಿದರು. ಅವರ ಕಾರ್ಯಕ್ರಮಗಳ ಉದ್ದನೆಯ ಪಟ್ಟಿಯೇ ಇದೆ. ಅವರ ಕಾರ್ಯಗಳೇ ನಮಗೆ ಪ್ರೇರಣೆ ಎಂದು ಸಿದ್ದರಾಮಯ್ಯ ಹೇಳಿದರು.

ಅರಸು ಅವರು ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯಿದ್ದ ರಾಜಕಾರಣಿ. ಅವರು ಮೈಸೂರು ರಾಜ್ಯಕ್ಕೆ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ಜನಪರವಾದ ಕಾಳಜಿ, ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯಿರುವ ರಾಜಕಾರಣಿಯನ್ನು ನಮ್ಮ ಸರ್ಕಾರ ಸ್ಮರಿಸಿದೆ ಎಂದರು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್‌ ತಂಗಡಗಿ, ಗ್ಯಾರಂಟಿ ಅನುಷ್ಠಾನ ರಾಜ್ಯ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿ ಹಲವರು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ