ಬೆಂಗಳೂರು : ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಬಿಡುಗಡೆಯ ಸೂತ್ರಧಾರಿಗಳಾಗಿದ್ದಾರೆ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಸಂಜೆ ಬೆಂಗಳೂರಿನಲ್ಲಿ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಮಿಷವೊಡ್ಡಿರುವ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದರು.
ಡಿ.ಕೆ.ಶಿವಕುಮಾರ್ ಈ ಪ್ರಕರಣದಲ್ಲಿ ನಡೆದಿರುವ ಎಲ್ಲ ಬೆಳವಣಿಗೆಯ ರೂವಾರಿಯಾಗಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಸರ್ಕಾರದ ಕೈಗೊಂಬೆಯಾಗಿದ್ದು, ಪಾರದರ್ಶಕವಾಗಿ ತನಿಖೆ ನಡೆಯುವ ವಿಶ್ವಾಸ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು ಮತ್ತು ಸಿಲುಕಿಸಬೇಕು ಎಂಬುದರ ಕುರಿತು ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇತೃತ್ವದಲ್ಲಿ ಗೌಪ್ಯವಾಗಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪ್ರಕರಣದಲ್ಲಿ ತಮ್ಮನ್ನು ಸಹ ಸಿಲುಕಿಸಿ ಬಂಧಿಸುವ ಕುತಂತ್ರ ನಡೆಸಲಾಗಿದೆ. ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ವಿರುದ್ಧ ಹೋರಾಟ ಮಾಡಲಾಗುತ್ತಿದ್ದು, ಅದನ್ನೇ ಆಸ್ತ್ರವಾಗಿ ಇಟ್ಟುಕೊಂಡು ಕೆಲ ರಾಜಕಾರಣಿಗಳು ವಾಮಮಾರ್ಗದಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಿದ್ದಾರೆ.
ಪ್ರಕರಣ ಸಂಬಂಧ ತಮ್ಮ ಬಳಿ ಇರುವ ದಾಖಲೆಗಳನ್ನು ಎಸ್ಐಟಿಗೆ ನೀಡಿದರೆ ದುರುಪಯೋಗವಾಗುವ ಸಾಧ್ಯತೆ ಇರುವ ಕಾರಣ ನೇರವಾಗಿ ಸಿಬಿಐಗೆ ನೀಡಲಾಗುವುದು ಎಂದು ಹೇಳಿದರು.
ತಮಗೆ ಬೇಕಾದಂತೆ ಪ್ರಕರಣವನ್ನು ಕೊಂಡೊಯ್ಯಲು ತಮಗೆ ಕರೆ ಮಾಡಿ ಆಮಿಷವೊಡ್ಡಲಾಗಿದೆ. ಕಾಂಗ್ರೆಸ್ ನಾಯಕ ಎಲ್.ಆರ್.ಶಿವರಾಮೇಗೌಡ ನನಗೆ ಮೊದಲು ಕರೆ ಮಾಡಿ ಕೆಲವು ವಿಚಾರಗಳನ್ನು ಮಾತನಾಡಿದ ಬಳಿಕ ಪಕ್ಕದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಮೊಬೈಲ್ ನೀಡಿದರು ಎಂದು ಹೇಳಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿರುವ ಆರಂಭಿಕ ಸಂಭಾಷಣೆಯನ್ನು ಮಾತ್ರ ಪ್ಲೇ ಮಾಡಿ ಆಫ್ ಮಾಡಿದರು.ಪೆನ್‌ಡ್ರೈವ್ ಕಥಾನಾಯಕರೇ ಡಿ.ಕೆ.ಶಿವಕುಮಾರ್ ಅವರಾಗಿದ್ದಾರೆ.
ಶಿವಕುಮಾರ್ ಅವರು ತಮ್ಮ ಬೆಂಬಲಿಗರ ಮೂಲಕ ದೊಡ್ಡಮಟ್ಟದಲ್ಲಿ ಅಮಿಷವೊಡ್ಡಿದ್ದರು. ಸಚಿವ ಸಂಪುಟ ದರ್ಜೆಯ ಹುದ್ದೆ ನೀಡುವುದಾಗಿ ಅಮಿಷವೊಡ್ಡಿದ್ದರು. ಪೆನ್‌ಡ್ರೈವ್ ಹೇಗೆ ರೆಡಿ ಆಗಿದೆ? ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಗೆ ಏನೆಲ್ಲಾ ನಿರ್ದೇಶನಗಳನ್ನು ನೀಡಲಾಗಿತ್ತು? ಸೇರಿದಂತೆ ಹಲವು ವಿಚಾರಗಳು ನನಗೆ ಗೊತ್ತಿದೆ.
ಸಿಬಿಐಗೆ ಪ್ರಕರಣದ ತನಿಖೆ ನೀಡಿದರೆ ಸಂಪೂರ್ಣ ಆಡಿಯೋ ಸಂಭಾಷಣೆಯನ್ನು ಸಿಬಿಐಗೆ ನೀಡುತ್ತೇನೆ ಎಂದು ತಿಳಿಸಿದರು.ಡಿಲಿಟ್ ಮಾಡಲು ಎಸ್‌ಐಟಿ ಒತ್ತಾಯ: ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ. ತಂಡದಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿಯೊಬ್ಬರು ಡಿ.ಕೆ.ಶಿವಕುಮಾರ್ ಕುರಿತು ನೀಡಿರುವ ಹೇಳಿಕೆ ಡಿಲಿಟ್ ಮಾಡೋಣ ಎಂದಿದ್ದಾರೆ.
ಐಪಿಎಸ್ ಅಧಿಕಾರಿ ಸುಮನ್ ಡಿ.ಪೆನ್ನಕರ್ ಅವರು ಈ ಮಾತು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು ಹೇಳಿಕೆಯನ್ನು ಡಿಲಿಟ್ ಮಾಡುವಂತೆ ಒತ್ತಾಯ ಮಾಡಿದರೂ ಒಪ್ಪಿಲ್ಲ. ಡಿ.ಕೆ.ಶಿವಕುಮಾರ್ ಬಗ್ಗೆ ನೀಡಿರುವ ಹೇಳಿಕೆಯು ಪೊಲೀಸರ ಮುಂದೆ ನೀಡಿರುವ ಹೇಳಿಕೆಯಲ್ಲಿ ಉಳಿಯಲಿದೆ ಎಂದರು.
ಕಾರ್ತಿಕ್‌ಗೆ ರಕ್ಷಣೆ: ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ ಕಾರ್ತಿಕ್‌ಗೆ ಸರ್ಕಾರ ರಕ್ಷಣೆ ನೀಡಿದೆ. ಎಲ್.ಆರ್.ಶಿವರಾಮೇಗೌಡ ಜತೆ ಸಂಭಾಷಣೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೇ, ಅಶ್ಲೀಲ ವಿಡಿಯೋಗಳನ್ನು ನಾನು ಬಿಡುಗಡೆ ಮಾಡಿದ್ದೇನೆ ಎಂಬುದಾಗಿ ಬಿಂಬಿಸಲಾಗಿದೆ. ಆದರೆ ನಾನು ಯಾವುದೇ ವಿಡಿಯೋ ಬಿಡುಗಡೆ ಮಾಡಿಲ್ಲ.
ಕಾರ್ತಿಕ್ ಪೆನ್‌ಡ್ರೈವ್ ಅನ್ನು ಡಿ.ಕೆ.ಶಿವಕುಮಾರ್‌ಗೆ ನೀಡಿದ್ದಾನೆ. ಅದರ ಹಂಚಿಕೆಯ ಸೂತ್ರಧಾರಿ ಡಿ.ಕೆ.ಶಿವಕುಮಾರ್ ಅವರಾಗಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಹೆಸರಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕಪ್ಪುಮಸಿ ಬಳಿಯಲು ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಮೊದಲ ಹಂತದ ಮತದಾನಕ್ಕೂ ಮುನ್ನ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಚುನಾವಣೆಯಲ್ಲಿ ಪ್ರಧಾನಿಗೆ ನರೇಂದ್ರ ಮೋದಿ ಅವರಿಗೆ ಕೆಟ್ಟ ಹೆಸರು ತರಲು ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ದೂರಿದರು. ಸಂತ್ರಸ್ತರಿಗೆ ಹಣ ನೀಡಿ ಕರೆದುಕೊಂಡು ಬರಲಾಗುತ್ತಿದೆ. ಯಾವ ರೀತಿಯಲ್ಲಿ ದೂರುಗಳನ್ನು ದಾಖಲಿಸಲಾಗುತ್ತಿದೆ. ಯಾವ ಹೋಟೆಲ್‌ನಲ್ಲಿ ಎಷ್ಟು ಸಮಯ ಮಾತನಾಡಿದ್ದಾರೆ ಎನ್ನುವುದು ಸಿಸಿಟಿವಿಯಲ್ಲಿ ಗೊತ್ತಾಗುತ್ತದೆ. ಈ ಪ್ರಕರಣ ದಿಕ್ಕನ್ನೇ ಬದಲಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.