ವ್ಹೀಲ್‌ ಚೇರಲ್ಲಿ ಬಂದು ಸಾಂತ್ವನ ಹೇಳಿದ ದೇವೇಗೌಡರು

KannadaprabhaNewsNetwork |  
Published : Sep 14, 2025, 01:04 AM IST
13ಎಚ್ಎಸ್ಎನ್16 :  | Kannada Prabha

ಸಾರಾಂಶ

ಜೆಡಿಎಸ್ ಪಕ್ಷದ ಪರವಾಗಿ ದೇವೇಗೌಡರು ತಮ್ಮದೇ ಆದ ಸಹಾಯವನ್ನೂ ಘೋಷಿಸಿದರು. ಗಂಭೀರವಾಗಿ ಗಾಯಗೊಂಡವರಿಗೆ ೨೫ ಸಾವಿರ, ಸಣ್ಣಪುಟ್ಟ ಗಾಯಗಳಾಗಿರುವವರಿಗೆ ೨೦ ಸಾವಿರ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣೇಶೋತ್ಸವದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶನಿವಾರ ವ್ಹೀಲ್‌ ಚೇರಿನಲ್ಲೇ ಆಸ್ಪತ್ರೆಗೆ ಬಂದು ಭೇಟಿ ಮಾಡಿ ಸಾಂತ್ವನ ಹೇಳಿ, ಮೃತರಿಗೆ ತಮ್ಮ ಪಕ್ಷದಿಂದಲೂ ಪರಿಹಾರ ಘೋಷಿಸಿದರು.

ಮಾಧ್ಯಮದೊಂದಿಗೆ ಮಾತನಾಡಿ, ನನಗೆ ಯಾವುದೇ ರಾಜಕೀಯ ಭ್ರಮೆ ಇಲ್ಲ. ನನಗೆ ಶಕ್ತಿ ಇರೋವರೆಗೆ ಕೆಲಸ ಮಾಡುತ್ತೇನೆ. ರಾಜಕೀಯ ನಿವೃತ್ತಿ ಎಂದೂ ನಾನು ಹೇಳಿಲ್ಲ. ಮೊನ್ನೆ ಎನ್‌ಡಿಎ ಸಭೆಯಲ್ಲಿ ಪ್ರಧಾನಮಂತ್ರಿಯವರೇ ಬಂದು ಕೈಕುಲುಕಿ, ತಮ್ಮ ಭಾಷಣದಲ್ಲಿ ನನ್ನ ಹೆಸರು ಪ್ರಸ್ತಾಪಿಸಿದ್ದರು. ನನ್ನ ಕೆಲಸ ಇನ್ನೂ ಮುಗಿದಿಲ್ಲ, ಮಾಡಬೇಕಾದ ಕೆಲಸ ಬಾಕಿ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಹಾಸನದಲ್ಲಿ ಮೃತಪಟ್ಟ ೯ ಜನರಲ್ಲಿ ೬ ಜನ ಹೊಳೇನರಸೀಪುರ ತಾಲೂಕಿನವರೇ ಆಗಿದ್ದು, ಅಲ್ಲಿನ ಜನರೊಂದಿಗೆ ತಮ್ಮ ಆತ್ಮೀಯ ಬಾಂಧವ್ಯವಿದೆ ಎಂದು ದೇವೇಗೌಡರು ಭಾವುಕರಾದರು. ನಾನು ಇಲ್ಲಿಗೆ ಬಂದಿದ್ದು ರಾಜಕೀಯಕ್ಕಲ್ಲ, ನನಗೆ ಇರುವ ಸೆಂಟಿಮೆಂಟ್‌ಗೆ. ನನ್ನ ತಾಯಿ ಆ ಊರಿನವರು, ನಾನು ಆ ಗ್ರಾಮದ ಮಗ. ಆ ಸಂಬಂಧದಿಂದ ಬಂದಿದ್ದೇನೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ೫ ಲಕ್ಷ ರು. ಪರಿಹಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ೨ ಲಕ್ಷ ರು. ಮತ್ತು ಗಾಯಾಳುಗಳಿಗೆ ೫೦ ಸಾವಿರ ರು. ಪರಿಹಾರ ಘೋಷಿಸಿರುವುದನ್ನು ದೇವೇಗೌಡರು ಮೆಚ್ಚಿಕೊಂಡರು. ಆದಾಗ್ಯೂ ಮೃತರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತವೆ. ಪೋಷಕರು ದುಡಿಯಲಾಗದೆ ನಿರ್ಗತಿಕರಾಗುತ್ತಾರೆ. ಆದ್ದರಿಂದ ಕನಿಷ್ಠ ೧೦ ಲಕ್ಷ ರು.ಗಳನ್ನು ರಾಜ್ಯ ಸರ್ಕಾರ ಪರಿಹಾರವಾಗಿ ನೀಡಬೇಕು. ನಾನು ಸಿದ್ದರಾಮಯ್ಯನವರ ಬಳಿ ಇದನ್ನೇ ಮನವಿ ಮಾಡುತ್ತೇನೆ. ಕೊಡೋದು ಬಿಡೋದು ಅವರ ನಿರ್ಧಾರ ಎಂದರು.

ಜೆಡಿಎಸ್ ಪಕ್ಷದ ಪರವಾಗಿ ದೇವೇಗೌಡರು ತಮ್ಮದೇ ಆದ ಸಹಾಯವನ್ನೂ ಘೋಷಿಸಿದರು. ಗಂಭೀರವಾಗಿ ಗಾಯಗೊಂಡವರಿಗೆ ೨೫ ಸಾವಿರ, ಸಣ್ಣಪುಟ್ಟ ಗಾಯಗಳಾಗಿರುವವರಿಗೆ ೨೦ ಸಾವಿರ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಶಾಸಕ ಎ. ಮಂಜು, ಎಚ್.ಪಿ. ಸ್ವರೂಪ್, ಮೇಯರ್ ಹೇಮಾಲತಾ ಕಮಾಲ್ ಕುಮಾರ್, ಮಂಜೇಗೌಡ ಇತರರು ಇದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ