ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಪ್ರಧಾನಿ ದೇವೇಗೌಡರ 93ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶಾಸಕ ಎಚ್.ಟಿ.ಮಂಜು ದಂಪತಿ ಹೊಸಹೊಳಲಿನ ಕೋಟೆ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.ಪತ್ನಿ ರಮಾ ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ಕೋಟೆ ಭೈರವೇಶ್ವರ ದೇವಾಲಯಕ್ಕೆ ಆಗಮಿಸಿದ ಶಾಸಕ ಎಚ್.ಟಿ.ಮಂಜು ಎಚ್.ಡಿ.ದೇವೇಗೌಡರಿಗೆ ಆಯಸ್ಸು, ಆರೋಗ್ಯ ಕೋರಿ ಗೌಡರ ಹೆಸರಿನಲ್ಲಿ ಅರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ವೇಳೆ ಶಾಸಕ ಎಚ್.ಟಿ.ಮಂಜು ಮಾತನಾಡಿ, ದೇವೇಗೌಡರು ಕೇವಲ ಜೆಡಿಎಸ್ ನಾಯಕರಲ್ಲ. ದೇಶದ ಸಮಸ್ತ ರೈತರ ಪ್ರತಿನಿಧಿ. ಇಳಿವಯಸ್ಸಿನಲ್ಲಿಯೂ ರೈತರ ಬಗ್ಗೆ ಚಿಂತಿಸುವ ಗೌಡರು ರೈತಪರ ಹೋರಾಟಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದರು.ಹೇಮಾವತಿ ಜಲಾಶಯ ಯೋಜನೆ ಸೇರಿದಂತೆ ನಾಡಿನ ಪ್ರಮುಖ ನೀರಾವರಿ ಯೋಜನೆಗಳು ಪೂರ್ಣಗೊಂಡು ರೈತರ ಭೂಮಿ ಹಸಿರಾಗಲು ದೇವೇಗೌಡರು ಕಾರಣಕರ್ತರಾಗಿದ್ದಾರೆ. ದೇಶಕ್ಕೆ ದೇವೇಗೌಡರ ಸೇವೆ ಮತ್ತಷ್ಟು ಬೇಕಾಗಿದೆ. ನಮ್ಮೆಲ್ಲರಿಗೂ ದೇವೇಗೌಡರು ಸ್ಫೂರ್ತಿ. ಅವರ ಮಾರ್ಗದರ್ಶನ ನಿರಂತರವಾಗಿರಬೇಕು ಎಂದು ಶುಭಕೋರಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ನೂರಾರು ಜೆಡಿಎಸ್ ಕಾರ್ಯಕರ್ತರು ಗೌಡರ ಪರ ಜಯ ಘೋಷಣೆಗಳನ್ನು ಹಾಕಿದರು. ಎಂಡಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಪಂ ಮಾಜಿ ಸದಸ್ಯರಾದ ಹೊಸಹೊಳಲು ರಾಜು, ಮಲ್ಲೇನಹಳ್ಳಿ ಮೋಹನ್, ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಚಂದ್ರೇಗೌಡ, ಹೊಸಹೊಳಲು ಗ್ರಾಮದ ಮುಖಂಡ ಚಿಕ್ಕೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ, ಮುಖಂಡರಾದ ನರಸ ನಾಯಕ್, ಮಾಕವಳ್ಳಿ ವಸಂತಕುಮಾರ್, ರವಿಕುಮಾರ್, ಬಸವಲಿಂಗಪ್ಪ, ಪುರಸಭಾ ಸದಸ್ಯ ಯೋಗೇಶ್, ಮಾಜಿ ಸದಸ್ಯ ಕೆ.ಆರ್.ಹೇಮಂತಕುಮಾರ್, ಅರಳಕುಪ್ಪೆ ಪ್ರತಾಪ್, ಮಾಕವಳ್ಳಿ ಕುಮಾರ್ ಸೇರಿದಂತೆ ಹಲವರು ಇದ್ದರು.