ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ: ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ

KannadaprabhaNewsNetwork |  
Published : Jun 27, 2025, 12:49 AM IST
೨೬ಎಸ್.ಆರ್.ಎಸ್೧ಪೊಟೋ೧ (ನಗರದ ರಂಗಧಾಮದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಸಹಾಐಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಉದ್ಘಾಟಿಸಿದರು.)೨೬ಎಸ್.ಆರ್.ಎಸ್೧ಪೊಟೋ೨ (ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.) | Kannada Prabha

ಸಾರಾಂಶ

ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಉಡುಗೊರೆ ನೀಡಬೇಕು.

ಶಿರಸಿ: ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹೇಳಿದರು.

ನಗರದ ರಂಗಧಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಶಿರಸಿ ಉಪವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಉಡುಗೊರೆ ನೀಡಬೇಕು. ದುಶ್ಚಟ ರೂಢಿಸಿಕೊಂಡರೆ ಅದರಿಂದ ಹೊರಬರುವುದು ಬಹಳ ಕಷ್ಟ. ಮಾದಕ ವಸ್ತುಗಳು ಮಾರಾಟ ಅಥವಾ ಸಾಗಾಟ ಕಂಡುಬಂದ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಮಾದಕ ದ್ರವ್ಯಗಳ ಅಪಾಯಗಳ ಕುರಿತು ರೋಟರಿ ಕಾರ್ಯದರ್ಶಿ ಡಾ. ದಿನೇಶ್ ಹೆಗಡೆ ಮಾತನಾಡಿ, ಮಹಾ ನಗರದಲ್ಲಿ ಮಾತ್ರವಲ್ಲ, ಈಗ ಸಣ್ಣ ಸಣ್ಣ ನಗರಗಳಲ್ಲೂ ಮಾದಕ ದ್ರವ್ಯಗಳ ಹಾವಳಿ ಜಾಸ್ತಿಯಾಗುತ್ತಿದೆ. ಶಾಲಾ ಮಕ್ಕಳೂ ಬಲಿಯಾಗುತ್ತಿದ್ದಾರೆ. ಚಟಗಳಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಡಿಎಸ್‌ಪಿ ಗೀತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಶಿರಸಿ ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ. ಪ್ರಾಸ್ತಾವಿಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಶಕ್ತಿ ಅಡ್ಡದಾರಿ ಹಿಡಿದು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ. ಅವರನ್ನು ಎಚ್ಚರಗೊಳಿಸಿ, ಸರಿ ದಾರಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಯುವ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತಂದು ಮಾದಕ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳುವುದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದರು.

ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಸಿಪಿಐ ಶಶಿಕಾಂತ ವರ್ಮಾ, ಗ್ರಾಮೀಣ ಠಾಣೆಯ ಪಿಐ ಮಂಜುನಾಥ ಗೌಡ, ಸಾಮಾಜಿಕ ಕಾರ್ಯಕರ್ತ ವಿ.ಪಿ. ಹೆಗಡೆ ವೈಶಾಲಿ, ಶಿರಸಿ ಅರ್ಬನ ಬ್ಯಾಂಕ್ ನಿರ್ದೇಶಕ ನಿತಿನ್‌ ಕಾಸರಕೋಡ ಉಪಸ್ಥಿತರಿದ್ದರು.

ಹೊಸ ಮಾರುಕಟ್ಟೆ ಠಾಣೆ ಪಿಎಸ್‌ಐ ರತ್ನಾ ಕುರಿ ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ರಮೇಶ ಮುಚ್ಚಂಡಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಸಂಗಡಿಗರು ಪ್ರಾರ್ಥಿಸಿದರು.

ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅವುಗಳ ತಡೆಗಟ್ಟುವಲ್ಲಿ ಯುವ ಜನತೆಯ ಪಾತ್ರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಚಂದನ ಪಿಯು ಕಾಲೇಜಿನ ಅನನ್ಯಾ ಭಟ್, ಅರಣ್ಯ ಮಹಾವಿದ್ಯಾಲಯದ ವಿನೋದ್, ಎಂಇಎಸ್ ಕಾಲೇಜಿನ ಸುವರ್ಣ ಸಾವನ್ ಹುಂಡಿ, ದ್ವಿತೀಯ ಸ್ಥಾನ ಪಡೆದ ಅರಣ್ಯ ಮಹಾವಿದ್ಯಾಲಯದ ಬಸವ ಪ್ರಭು ಎಂ. ಬಡಿಗೇರ, ತಾಯಕ್ಕ ನಿಂಗಪ್ಪ ಕರಿಗೌಡ, ತೃತೀಯ ಸ್ಥಾನ ಪಡೆದ ಮಾರಿಕಾಂಬಾ ಸರ್ಕಾರಿ ಕಾಲೇಜಿನ ಧನ್ಯಾ ನಾಗರಾಜ ಹೆಗಡೆ, ಚಂದನ ಎಸ್. ಅವರಿಗೆ ಬಹುಮಾನ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಂಸನಾ ಪತ್ರ ವಿತರಿಸಲಾಯಿತು.

ನಗರದ ಬಿಡ್ಕಿಬೈಲ್‌ನಿಂದ ಆರಂಭಗೊಂಡ ಮಾದಕ ದ್ರವ್ಯ ವಿರೋಧಿ ಜಾಥಾ ಸಿಪಿ ಬಜಾರ್ ದೇವಿಕೆರೆ, ಹೊಸಪೇಟೆ ರಸ್ತೆ ಅಶ್ವಿನಿ ವೃತ್ತದ ಮೂಲಕ ರಂಗಧಾಮದಲ್ಲಿ ಮುಕ್ತಾಯಗೊಂಡಿತು. ಜಾಥಾಕ್ಕೆ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹಾಗೂ ಡಿಎಸ್‌ಪಿ ಗೀತಾ ಪಾಟೀಲ ಚಾಲನೆ ನೀಡಿದರು. ಜಾಥಾದಲ್ಲಿ ವಿವಿಧ ಶಾಲಾ-ಕಾಲೇಜುಗಳ ಸುಮಾರು ೮೦೦ರಿಂದ ೧ ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡು ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌