ಮಕ್ಕಳಲ್ಲಿ ಕಲಿಕಾಸಕ್ತಿ ವೃದ್ಧಿಸಿ, ಪರೀಕ್ಷೆಗೆ ತಯಾರು ಮಾಡಿ

KannadaprabhaNewsNetwork | Published : Dec 9, 2024 12:46 AM

ಸಾರಾಂಶ

ಚಾಮರಾಜನಗರದ ಬಿಆರ್‌ಸಿ ಕಚೇರಿ ಸಭಾಂಗಣದಲ್ಲಿ ತಾಲೂಕಿನ ೨೯ ಸರ್ಕಾರಿ ಪ್ರೌಢಶಾಲೆಗಳಿಗೆ ಒಂದು ಲಕ್ಷ ರು. ವೆಚ್ಚದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಷಯವಾರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಂಪನ್ಮೂಲ ಕೈಪಿಡಿಯನ್ನು ಇಲಾಖೆಯ ಶಾಖಾಧಿಕಾರಿ ಅಪ್ಪಣ್ಣ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವ ಜೊತೆಗೆ ಅವರಿಗೆ ಉಪಯುಕ್ತವಾದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಶಿಕ್ಷಕರು ಬೆಳೆಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಬೆಂಗಳೂರಿನ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಶಾಖಾಧಿಕಾರಿ ಅಣ್ಣಪ್ಪ ತಿಳಿಸಿದರು. ನಗರದ ಬಿಆರ್‌ಸಿ ಕಚೇರಿ ಸಭಾಂಗಣದಲ್ಲಿ ಬೆಂಗಳೂರಿನ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ತಾಲೂಕಿನ ೨೯ ಸರ್ಕಾರಿ ಪ್ರೌಢಶಾಲೆಗಳಿಗೆ ಒಂದು ಲಕ್ಷ ರು.ವೆಚ್ಚದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಷಯವಾರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಂಪನ್ಮೂಲ ಕೈಪಿಡಿಗಳನ್ನು ಸುಮಾರು ೧೦ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ವಿತರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ಮಕ್ಕಳು ಸಹ ಉತ್ತೀರ್ಣರಾಗಿ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಭೋದಕ ಶಿಕ್ಷಕರಿಗೆ ಅನುಕೂಲವಾಗುವಂತೆ ಸಂಪನ್ಮೂಲ ವ್ಯಕ್ತಿಗಳಿಂದ ಎಸ್ಸೆಸ್ಸೆಲ್ಸಿ ಕೈಪಿಡಿಯನ್ನು ರಚಿಸಲಾಗಿದೆ. ಈ ಕೈಪಿಡಿಯನ್ನು ಓದಿದ ವಿದ್ಯಾರ್ಥಿ ಕನಿಷ್ಟ ೪೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಜೊತೆಗೆ ಉತ್ತಮ ಅಂಕವನ್ನು ಗಳಿಸಲು ಸಾಧ್ಯವಿದೆ. ಹೀಗಾಗಿ ಮುಖ್ಯಶಿಕ್ಷಕರು ತಮ್ಮ ಶಾಲೆಯ ವಿಷಯವಾರು ಶಿಕ್ಷಕರಿಗೆ ನೀಡುವ ಮೂಲಕ ಅವರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಅವರನ್ನು ಪರಿಪೂರ್ಣವಾಗಿ ಪರೀಕ್ಷೆಗೆ ಅನುವು ಮಾಡಬೇಕು ಎಂದರು. ಚಾಮರಾಜನಗರ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪ್೧೦ರ ಪಟ್ಟಿಯಲ್ಲಿರುವಂತೆ ಮಾಡಬೇಕು. ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಉತ್ತೀರ್ಣರಾಗಬೇಕು. ಗ್ರಾಮಾಂತರ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಆಂಗ್ಲ ಹಾಗೂ ಗಣಿತದಲ್ಲಿ ಸ್ಪಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸುತ್ತಾರೆ. ಇಂಥವರಿಗೆ ವಿಶೇಷ ತರಗತಿ, ಮಾದರಿ ಪರೀಕ್ಷೆಗಳನ್ನು ನಡೆಸಿ, ಅವರು ಪರೀಕ್ಷೆಗೆ ತಯಾರು ಮಾಡಬೇಕು ಎಂದರು. ಕ್ಷೇತ್ರಾ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷದಲ್ಲಿಯೇ ವಿವಿಧ ಯೋಜನೆಗಳನ್ನು ರೂಪಿಸಿ, ಶಿಕ್ಷಕರಿಗೆ ತರಬೇತಿ ಜೊತೆಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಲಾಗುತ್ತಿದೆ. ಇಲಾಖೆಯ ನೀಡಿರುವ ಈ ಕೈಪಿಡಿ ಬಹಳ ಉಪಯುಕ್ತವಾಗಿದ್ದು, ಶಿಕ್ಷಕರು ತಾವು ಮಾಡುವ ಪಾಠದ ಜೊತೆಗೆ ಇಂಥ ಕೈಪಿಡಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ನೇಮಿರಾಜ್, ಸಹಕಾರ್ಯದರ್ಶಿ ಮಹೇಶ್ ಎಸ್. ಖಜಾಂಚಿ ನಿರ್ಮಲ, ನಿಕಟಪೂರ್ವ ಅಧ್ಯಕ್ಷ ಕಾಳಸ್ವಾಮಿ, ನಿರ್ದೇಶಕರಾದ ಸುಮನ್‌ಕುಮಾರ್, ನಾಗರಾಜು, ಎನ್.ಎಸ್. ಮಹದೇವಸ್ವಾಮಿ, ಸಿ.ಕೆ. ರಾಮಸ್ವಾಮಿ, ರಾಜು, ಶಿಕ್ಷಣ ಸಂಯೋಜಕ ತ್ಯಾಗರಾಜು, ಮೂರ್ತಿ, ಪರಶಿವಮೂರ್ತಿ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

Share this article