ವಿದ್ಯಾರ್ಥಿಗಳಾಗಿರುವಾಗಲೇ ನಾಯಕತ್ವ ಗುಣ ಬೆಳೆಸಿ: ಡಾ.ಜೆ. ಸೋಮಣ್ಣ

KannadaprabhaNewsNetwork |  
Published : Oct 01, 2025, 01:01 AM IST
ಚಿತ್ರ : 28ಎಂಡಿಕೆ3 : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದಪ್ರಸಕ್ತ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿದ್ಯಾರ್ಥಿಗಳಾಗಿರುವಾಗಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಡಾ. ಜೆ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿದ್ಯಾರ್ಥಿಗಳಾಗಿರುವಾಗಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಜೆ. ಸೋಮಣ್ಣ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ 2025-26ನೇ ಸಾಲಿನ ಕಾಲೇಜಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾಯಕರಾಗಬೇಕಾದರೆ ವಿನಯ ಬೆಳೆಸಿಕೊಳ್ಳಬೇಕು. ವಿಚಾರ ವಿನಿಮಯ ತಿಳಿದುಕೊಳ್ಳಬೇಕು. ಯುವ ಪೀಳಿಗೆಯ ಮೇಲೆ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಜವಾಬ್ದಾರಿ ಇದೆ. ಅದನ್ನು ಅರಿತುಕೊಂಡು ಮುನ್ನಡೆಯಬೇಕು ಎಂದರು. ಮಾನವೀಯತೆಯ ಭದ್ರ ಬುನಾದಿ ಮೇಲೆ ನಮ್ಮ ಸಮಾಜ ಕಟ್ಟಲಾಗಿದೆ. ಅಂತಹ ಸಮಾಜ ಉಳಿಸಿಕೊಳ್ಳಬೇಕು. ಭಾರತ ಸಮಾಜವಾದಿ ರಾಷ್ಟ್ರವಾಗಿದೆ. ಭಾರತದ ಹೆಸರು ದೇಶ ವಿದೇಶದಲ್ಲಿ ಮೊಳಗುವಂತೆ ಯುವ ಪೀಳಿಗೆಯು ಸಾಧಿಸಬೇಕೆಂದು ತಿಳಿಸಿದರು.ಪಂಪ ಹೇಳಿದಂತೆ ಮಾನವ ಕುಲ ಒಂದೇ, ಭಾರತವು ಸಮಾಜವಾದಿ, ಸರ್ವಧರ್ಮ ರಾಷ್ಟ್ರ ವಿದ್ಯಾರ್ಥಿಗಳು ಇದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು:

ಸಂವಿಧಾನ ಉಳಿಯಬೇಕೆಂದರೆ ಯುವ ಪೀಳಿಗೆಯೂ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು.ತಂದೆ-ತಾಯಿ ಮಾಡಿದ ಆಸ್ತಿ ಅನುಭವಿಸಬಾರದು. ನಮ್ಮ ಆಸ್ತಿಯನ್ನು ನಾವೇ ಸಂಪಾದಿಸಬೇಕು ಕನಸು ಕಾಣುವುದಕ್ಕಿಂತ ಮುಂಚೆ ಆಲೋಚಿಸಿ ಕನಸನ್ನು ಕಂಡು ನನಸು ಮಾಡಲು ಪ್ರಯತ್ನಿಸಿ ಎಂದು ನುಡಿದರು.ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಗುರುತಿಸಿಕೊಳ್ಳಲಾರರು. ತಮ್ಮ-ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಮಾತ್ರ ಸಾಮಾಜಿಕ ಜಾಲತಾಣ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗಬೇಕು. ಕಷ್ಟಗಳು ನಿರ್ಜೀವ ವಸ್ತುಗಳಿಗೆ ಬರುವುದಿಲ್ಲ ಜೀವವಿರುವ ಜೀವಿಗಳಿಗೆ ಬರುವುದು ಪ್ರತಿಯೊಂದು ಹಂತವನ್ನು ಬಗೆಹರಿಸಿ ಮುಂದೆ ಸಾಗಬೇಕು ಎಂದು ನುಡಿದರು.

ಗೆಲ್ಲಲು ಸಾಧ್ಯವಿಲ್ಲ:

ಹಣದಿಂದ ಯಾವುದನ್ನು ಗೆಲ್ಲಲು ಸಾಧ್ಯವಿಲ್ಲ. ಮನಸ್ಥೈರ್ಯ, ಧೈರ್ಯ, ಛಲ ಇದ್ದರೆ ಯಾವುದನ್ನು ಏನನ್ನಾದರೂ ಯಾವಾಗ ಬೇಕಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚು ಮಹತ್ವವನ್ನು ನೀಡಬೇಕು ಕಲಿಕೆಯ ಜೊತೆಗೆ ಕ್ರೀಡೆಯು ಬಹು ಮುಖ್ಯವಾಗಿದೆ. ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಗಮನ ನೀಡಬೇಕು ಎಂದರು. ಶ್ರೇಷ್ಠ ಸಾಧುಸಂತರ, ಮಹಾನ್ ವ್ಯಕ್ತಿಗಳ, ವಿಜ್ಞಾನಿಗಳ ಬದುಕನ್ನು ತಿಳಿದುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ರೂಪಿಸಿಕೊಳ್ಳಬೇಕು ಎಂದರು. ದೊಡ್ಡ-ದೊಡ್ಡ ಕನಸು ಕಂಡು ತಮ್ಮ ಬದುಕು ಕಟ್ಟುವ ಜೊತೆಗೆ ದೇಶದ ಬದುಕನ್ನು ಕಟ್ಟಬೇಕು. ಪ್ರತಿಯೊಬ್ಬರಲ್ಲಿಯೂ ಕಲೆ ಅಡಗಿದೆ. ಅದನ್ನು ಹೊರ ತರುವ ಪ್ರಯತ್ನ ನಡೆಸಿ ಮುಂದೆ ಸಾಗಬೇಕು ಹಾಗೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಪಿಸಿಕೊಂಡು ಬದುಕಬೇಕು ಎಂದು ತಿಳಿಸಿದರು.ಪ್ರಮುಖರಾದ ನವೀನ್ ಅಂಬೆಕಲ್ಲು ಮಾತನಾಡಿ, ವಿದ್ಯಾರ್ಥಿ ಜೀವನ ಮರುಕಳಿಸಲಾರದು. ಕಲಿಕೆ ಹಂತವು ಮುಖ್ಯ ಹಂತವಾಗಿರುವುದರಿಂದ ವಿದ್ಯಾರ್ಥಿಗಳು ಗುರಿಯನ್ನು ನಿರ್ಧರಿಸಿಕೊಂಡು ಗುರಿ ತಲುಪುವ ಕಾರ್ಯನಿರ್ವಹಿಸಬೇಕು ಹಾಗೆಯೇ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ನೆರದಿರುವ ವಿದ್ಯಾರ್ಥಿಗಳಿಗೆ ತಿಳಿಸಿದರು.ಆಸಕ್ತಿ ನೀಡಬೇಕು:

ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಶುಭ ಕೋರಿದರು. ಪಠ್ಯ ಜೊತೆಗೆ ಪಠ್ಯೇತರ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು, ಭಿನ್ನ-ಭಿನ್ನವಾದ ಕ್ಷೇತ್ರಗಳಿಗೆ ವಿದ್ಯಾರ್ಥಿಗಳು ಆಸಕ್ತಿ ನೀಡಬೇಕು ಎಂದು ನುಡಿದರು. ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ಕಾಲೇಜಿಗೆ ನೀಡಬೇಕು ಎಂದು ಆಶಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್ನ ಮಾತನಾಡಿ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲ. ಪ್ರತಿಯೊಂದು ಅವ್ಯವಸ್ಥೆಯನ್ನು ಸರಿಪಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಂಪೂರ್ಣ ವಿದ್ಯೆ ಒದಗಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ಅದನ್ನು ಸಂಪೂರ್ಣವಾಗಿ ನಿಭಾಯಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.ವಿದ್ಯಾರ್ಥಿಗಳ ಗುಣ ಮತ್ತು ಸ್ವಭಾವ ಹೇಗಿರುವುದೋ ಅದೇ ರೀತಿಯಲ್ಲಿಯೇ ಕಾಲೇಜಿನ ಸ್ವಭಾವ ಇರುವುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ-ತಮ್ಮ ಗುಣ ಸ್ವಭಾವ ನಡವಳಿಕೆಯನ್ನು ಉತ್ತಮವಾಗಿ ನಡೆಸಿಕೊಂಡು, ಕಾಲೇಜಿಗೆ ಗೌರವ ತರಬೇಕು ಎಂದು ನುಡಿದರು. ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್ ಮಾತನಾಡಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಗೃತಿ ಮೂಡಿಸಿದರೆ, ಇಡೀ ಸಮುದಾಯದಲ್ಲಿ ಅರಿವು ಮೂಡಿಸಿದಂತಾಗುತ್ತದೆ ಎಂದರು. ಪರಿಸರ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕ್ರೀಡಾ ಕಾರ್ಯದರ್ಶಿಯಾದ ಧನರಾಜ್, ಸಿಡಿಸಿ ಘಟಕದಿಂದ ಶಶಿ, ನೂರ್ ಜಹಾನ್ ಬೇಗಮ್, ವಿದ್ಯಾರ್ಥಿಗಳ ಕ್ಷೇಮ ಪಾಲನಾಧಿಕಾರಿ ಡಾ.ಅನುಪಮಾ, ಎನ್.ಎಸ್.ಎಸ್ ಘಟಕದ ಕಾರ್ಯದರ್ಶಿ ಸುಧಾಕರ್, ಪ್ರಾಧ್ಯಾಪಕರಾದ ಚೈತ್ರ ಇತರರು ಇದ್ದರು.

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ