ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿ

KannadaprabhaNewsNetwork | Published : Apr 27, 2025 1:34 AM

ಸಾರಾಂಶ

ಹೊಳೆಹೊನ್ನೂರು: ಪೋಷಕರು ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಬೇಕು ಎಂದು ಜ್ಞಾನದೀಪ ಶಾಲೆಯ ಹಳೆಯ ವಿದ್ಯಾರ್ಥಿ ಡಾ.ಸ್ವರೂಪ್ ಮಲ್ಲೇಶ್ ಹೇಳಿದರು.

ಹೊಳೆಹೊನ್ನೂರು: ಪೋಷಕರು ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಬೇಕು ಎಂದು ಜ್ಞಾನದೀಪ ಶಾಲೆಯ ಹಳೆಯ ವಿದ್ಯಾರ್ಥಿ ಡಾ.ಸ್ವರೂಪ್ ಮಲ್ಲೇಶ್ ಹೇಳಿದರು.

ಸಮೀಪದ ಜ್ಞಾನದೀಪ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಾವು ಕಂಡ ಕನಸನ್ನು ನನಸಾಗಿಸಿಕೊಳ್ಳಲು ಸದಾ ಜಾಗರೂಕರಾಗಿರಬೇಕು. ಧನಾತ್ಮಕ ಚಿಂತನೆ, ಸ್ವಯಂ ನಿರ್ಧಾರ, ಗುರಿಮುಟ್ಟುವ ನಿರ್ಧಾರಗಳನ್ನು ಮಕ್ಕಳು ಹೊಂದಿರಬೇಕು. ಪೋಷಕರಿಗೆ ಹಾಗೂ ಹಿರಿಯರಿಗೆ ಗೌರವವನ್ನು ಕೊಡಬೇಕು ಎಂದರು.

ತಮ್ಮಲ್ಲಿರುವ ಆಲಸ್ಯತನದಿಂದ ಹೊರಬಂದು ಗುರಿಮುಟ್ಟುವ ಕಡೆಗೆ ನಿರತರಾಗಿರಬೇಕು. ಪೋಷಕರು ಮಕ್ಕಳಿಗೆ ಪ್ರತಿನಿತ್ಯ ಒಳ್ಳೆಯ ಮಾತುಗಳನ್ನು ಹೇಳಿ ಸಂಸ್ಕಾರವನ್ನು ಬೆಳೆಸಬೇಕು. ಮಕ್ಕಳು ದೈಹಿಕವಾಗಿ ಬಲಗೊಳ್ಳಲು ಆಟಗಳು ಸಹಾಯಕವಾಗುತ್ತವೆ ಎಂದು ತಿಳಿಸಿದರು.

ಜ್ಞಾನದೀಪ ಶಾಲೆಯ ಹಳೆಯ ವಿದ್ಯಾರ್ಥಿ ತೇಜಸ್.ಡಿ.ಜಿ ಮಾತನಾಡಿ, ಪೋಷಕರು ಪ್ರತಿಯೊಬ್ಬ ಮಕ್ಕಳಿಗೂ ಅವರವರ ಅಭಿರುಚಿಗೆ ತಕ್ಕಂತೆ ವಿಷಯಗಳನ್ನು ಕಲಿಯಲು ಬಿಡಬೇಕು. ಮಕ್ಕಳ ಆಸೆಯನ್ನು, ಆಸಕ್ತಿಯನ್ನು ಸೀಮಿತಗೊಳಿಸಬಾರದು. ಮಕ್ಕಳಲ್ಲಿ ಕಲಿಯುವಾಗ ಶ್ರದ್ಧೆ ಇರಬೇಕು ಎಂದು ತಿಳಿಸಿದರು.ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ, ಜಾವಳ್ಳಿ ಹಾಗೂ ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಕೈಮರ ಹಾಗೂ ಗುರುಪುರ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಏಪ್ರಲ್‌ 01 ರಿಂದ ಇಲ್ಲಿಯವರೆಗೆ 2024-25ನೇ ಸಾಲಿನ ಬೇಸಿಗೆ ಶಿಬಿರವನ್ನು ಏಕಕಾಲದಲ್ಲಿ ಪ್ರಾರಂಭಿಸಲಾಗಿತ್ತು. ಈ ಶಿಬಿರದಲ್ಲಿ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಪ್ರೌಢಶಾಲಾ ವಿದ್ಯಾರ್ಥಿಗಳವರೆಗೆ ಸುಮಾರು 500 ಮಕ್ಕಳಿಗೆ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳ ಮೂಲಕ ಕಲಿಕೆಯಾಗುವಂತೆ ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ನೀಡಿದರು. ವಿಜ್ಞಾನ, ಭಾಷೆ, ಗಣಿತ, ಕಲೆ, ನಾಟಕ, ಸಂಗೀತ, ದೇಶಿಯ ಕ್ರೀಡೆ, ಯೋಗ, ಏರೋಬಿಕ್ಸ್ ಹಾಗೂ ಪ್ರವಾಸದ ಮೂಲಕ ಜೀವನ ಕೌಶಲ್ಯಗಳನ್ನು ಮಕ್ಕಳಿಗೆ ಕಲಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಅರಬಿಂದೊ ಫೌಂಡೇಶನ್ ಫಾರ್ ಎಜುಕೇಶನ್ ಹಾಗೂ ಜ್ಞಾನದೀಪ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ನವೋದಯ ವಿದ್ಯಾಲಯ ಸಮಿತಿಯ ಮಾಜಿ ಉಪ ಆಯುಕ್ತ ಡಾ.ಎಚ್.ಎನ್.ಎಸ್.ರಾವ್, ಶಾಲೆಯ ಹಿರಿಯ ಉಪ ಪ್ರಾಂಶುಪಾಲ ಡಾ.ರೆಜಿ ಜೋಸೆಫ್ ಹಾಗೂ ಶಾಲೆಯ ಉಪ ಪ್ರಾಂಶುಪಾಲೆ ವಾಣಿ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

Share this article