ಹಿರೇಕೆರೂರು: ಸೇವಾದಳದ ಮೂಲಕ ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿ, ಸೇವಾ ಮನೋಭಾವ ಮೂಡಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು. ಪಟ್ಟಣದ ಗುರು ಭವನದಲ್ಲಿ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಘಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಗಳ ವತಿಯಿಂದ ಶುಕ್ರವಾರ ಭಾರತ ಸೇವಾದಳದ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ತಾಳ್ಮೆ, ಸೇವಾ ಮನೋಭಾವದಿಂದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ. ರಾಷ್ಟ್ರದ ಗರಿಮೆಗೆ ಗರಿ ಮೂಡಿಸಿದ್ದು ಸೇವಾದಳವಾಗಿದೆ ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ ನಿಸ್ವಾರ್ಥ ಸೇವೆಯಂತಹ ಉದಾತ್ತ ಗುಣಗಳನ್ನು ಮೂಡಿಸುವ ಜತೆಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ತರಬೇತಿ ನೀಡುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಸೇವಾದಳದ ಚಟುವಟಿಕೆಯಿಂದ ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಶಿಸ್ತು, ಸಂಯಮ, ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ, ನಾಡಗೀತೆ ಸುಶ್ರಾವ್ಯವಾಗಿ ಹಾಡುವುದನ್ನು ಎಲ್ಲ ಶಿಕ್ಷಕರು ಕಲಿಸಬೇಕು ಎಂದರು.ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಬಿ.ವಿ. ಸೊರಟೂರ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳದ ರಾಜ್ಯ ಉಪಾಧ್ಯಕ್ಷ ಕೆ.ಡಿ. ದೀವಿಗಹಳ್ಳಿ, ಜಿಲ್ಲಾಧ್ಯಕ್ಷ ಬಿರಾದಾರ, ಉಪಾಧ್ಯಕ್ಷ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪೋಷಣ ಅಭಿಯಾನದ ಸಹಾಯಕ ನಿರ್ದೇಶಕ ಮಾರುತೆಪ್ಪ ಕೆ.ಎಚ್., ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ, ಜೆ.ಸಿ. ಫೀರಜಾದೆ, ಕೆ.ಎಸ್. ಪುಟ್ಟಪ್ಪಗೌಡ್ರ, ರಮೇಶ ಪೂಜಾರ, ಸಿ.ಎಸ್. ಚಳಗೇರಿ, ಎಸ್.ಎಸ್. ಕೋರಿಗೌಡ್ರ, ರಾಜು ತಳವಾರ, ಎಂ.ಸಿ. ಮುದಿಗೌಡ್ರ, ಎಸ್.ಆರ್. ಅಣ್ಣಯ್ಯನವರ, ಎಸ್.ವಿ. ಪಾಟೀಲ, ಪಿ.ಎಸ್. ಸಾಲಿ, ಬಿ.ಡಿ. ಪಾಟೀಲ, ನಾಗರಾಜ ಪುರದ, ಎನ್.ಎಸ್. ಹೆಗ್ಗೇರಿ, ಮನೋಜ ಪಾಟೀಲ, ಪಿ.ಬಿ. ನಿಂಗನಗೌಡ್ರ ಹಾಗೂ ಹಿರೇಕೆರೂರು, ರಟ್ಟೀಹಳ್ಳಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸೇವಾದಳದ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ಸೇವಾದಳದ ವಿದ್ಯಾರ್ಥಿಗಳಿಂದ ನಡೆದ ದೇಶಭಕ್ತಿ ಗೀತೆಗಳಿಗೆ ನೃತ್ಯ, ಯೋಗಾಸನ ಕಣ್ಮನ ಸೆಳೆದವು. ಇದಕ್ಕೂ ಮುನ್ನ ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಿಂದ ಮುಖ್ಯ ಬೀದಿಯ ಮೂಲಕ ಗುರುಭವನದ ವರೆಗೆ ಸೇವಾದಳದ ಮಕ್ಕಳ ಜಾಥಾ ನಡೆಯಿತು.