ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಯಲಿ

KannadaprabhaNewsNetwork | Published : Dec 8, 2024 1:16 AM

ಸಾರಾಂಶ

ಚನ್ನಪಟ್ಟಣ: ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮಕ್ಕೆ ಸೀಮಿತರಾಗದೇ, ಮಕ್ಕಳಲ್ಲಿನ ಇಂದ್ರಿಯ ಶಕ್ತಿಯನ್ನು ಗುರುತಿಸಿ ಉನ್ನತಮಟ್ಟಕ್ಕೆ ಏರಿಸುವ ಕೆಲಸ ಮಾಡಬೇಕು ಎಂದು ಸೇಂಟ್ ಜೋಸೆಫ್ ಚರ್ಚ್‌ನ ಫಾದರ್ ರೆವರೆಂಡ್ ನಾರ್‍ಮನ್ ಅರ್ನಾಲ್ಡ್ ಅಭಿಪ್ರಾಯಪಟ್ಟರು.

ಚನ್ನಪಟ್ಟಣ: ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮಕ್ಕೆ ಸೀಮಿತರಾಗದೇ, ಮಕ್ಕಳಲ್ಲಿನ ಇಂದ್ರಿಯ ಶಕ್ತಿಯನ್ನು ಗುರುತಿಸಿ ಉನ್ನತಮಟ್ಟಕ್ಕೆ ಏರಿಸುವ ಕೆಲಸ ಮಾಡಬೇಕು ಎಂದು ಸೇಂಟ್ ಜೋಸೆಫ್ ಚರ್ಚ್‌ನ ಫಾದರ್ ರೆವರೆಂಡ್ ನಾರ್‍ಮನ್ ಅರ್ನಾಲ್ಡ್ ಅಭಿಪ್ರಾಯಪಟ್ಟರು.

ನಗರದ ಸೇಂಟ್ ಆನ್ಸ್ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೇಂಟ್ ಆನ್ಸ್ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು.

ಕ್ರೀಡೆ ಎಂಬುದು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸುವ ಜತೆಗೆ ಅವರಲ್ಲಿರುವ ಕ್ರೀಡಾ ಸಾಮರ್ಥ್ಯವನ್ನು ಉನ್ನತಮಟ್ಟಕ್ಕೆ ಏರಿಸುವ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳು ಕೇವಲ ತಮ್ಮಲ್ಲಿರುವ ಸಣ್ಣಪುಟ್ಟ ಪ್ರತಿಭೆಗಳಿಗೆ ಸೀಮಿತವಾಗದೆ ಮತ್ತಷ್ಟು ಉನ್ನತಮಟ್ಟದ ಪ್ರತಿಭೆಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು. ಎಲ್ಲ ಕ್ರೀಡೆಗಳಲ್ಲಿ ಭಾಗಿಯಾಗಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಇಒ ರಾಮಲಿಂಗಯ್ಯ ಮಾತನಾಡಿ, ನಾವು ಇಂದು ಮಕ್ಕಳನ್ನು ಕೇವಲ ಅಂಕಗಳ ಆಧಾರದ ಮೇಲೆ ಗುರುತಿಸುವ ಪರಿಪಾಠ ಬೆಳೆಸಿಕೊಂಡಿದ್ದೇವೆ. ಆದರೆ ಇದು ಸೂಕ್ತವಾದುದ್ದಲ್ಲ. ಮಕ್ಕಳು ಇಂದು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು, ಮಕ್ಕಳಿಗೆ ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳನ್ನು ಕಲಿಸುವ ಅವಶ್ಯಕತೆ ಇದೆ. ಇದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಇದೇ ವೇಳೆ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೆಯೇ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕ್ಷೇತ್ರ ಸಮನ್ವಯಾಧಿಕಾರಿ ಸಿ.ರಾಜಶೇಖರ್, ಜಿಲ್ಲಾ ಅಗ್ನಿ ಸುರಕ್ಷತಾ ಅಧಿಕಾರಿ ಕೆ.ಬಿ. ಮಂಜುನಾಥ್, ವಿದ್ಯಾಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ಆಲ್ಫೋನ್ಸ್, ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ರಿನ್ಸಿ ಜೋಸೆಫ್, ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ರೋಸ್ಮಿ, ಸಿಸ್ಟರ್ ರೆಜಿನಾ ಮೇರಿ, ಸಿಸ್ಟರ್ ಜೋಸ್ಮಿನ್, ಮೇರಿ ರೀಟಾ, ಮುಖಂಡ ಲೋಕೇಶ್ ಭಾಗವಹಿಸಿದ್ದರು.ಪೊಟೋ೭ಸಿಪಿಟಿ೨:

ಚನ್ನಪಟ್ಟಣದ ಸೇಂಟ್ ಆನ್ಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕ್ರೀಡಾ ದಿನಾಚರಣೆಯಲ್ಲಿ ಫಾದರ್ ರೆವೆರೆಂಡ್ ನಾರ್‍ಮನ್ ಅರ್ನಾಲ್ಡ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು.

Share this article