ಕನ್ನಡಪ್ರಭ ವಾರ್ತೆ ಗುಡಿಬಂಡೆ
ಇಂದಿನ ಮಕ್ಕಳು ಹೆಚ್ಚಾಗಿ ಮೊಬೈಲ್- ಕಂಪ್ಯೂಟರ್ ಗಳನ್ನು ಬಳಕೆ ಮಾಡುತ್ತಾರೆ. ಆದರೆ ಪುಸ್ತಕದಲ್ಲಿ ಬರೆದಾಗ ಮಾತ್ರ ಅದು ತಲೆಯಲ್ಲಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್, ಕಂಪ್ಯೂಟರ್ ಗಳನ್ನು ಬಳಕೆ ಮಾಡುವುದರ ಬದಲಿಗೆ ಪುಸ್ತಕಗಳನ್ನು ಬಳಸುವುದು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿ ಮಾತನಾಡಿದರು.
ಬಡ ಮಕ್ಕಳಿಗೆ ಉತ್ತಮ ವಿದ್ಯೆ ಕಲಿಸಿ, ಸಾವಿರಾರು ವಿದ್ಯಾರ್ಥಿ ಸಮೂಹವನ್ನು ಹೊಂದಿರುವ ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್ ರವರನ್ನು ೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿರುವುದು ತುಂಬಾ ಸಂತೋಷ ಹಾಗೂ ಅರ್ಥಪೂರ್ಣವಾದ ಸಂಗತಿಯಾಗಿದೆ. ಈ ಭಾಗದಲ್ಲಿ ಹೆಚ್ಚು ತೆಲುಗು ಪ್ರಭಾವವಿದ್ದರೂ, ತೆಲುಗು ಆಡುಭಾಷೆಯಾದರೂ, ಕನ್ನಡ ಭಾಷೆಗೆ ಯಾವುದೇ ಧಕ್ಕೆಯಿಲ್ಲ. ಇಲ್ಲಿ ನೂರಾರು ಮಂದಿ ಸಾಹಿತಿಗಳು, ಕವಿಗಳು ಕನ್ನಡ ಭಾಷೆ ಉಳಿವಿಗೆ ಶ್ರಮಿಸುತ್ತಿದ್ದಾರೆ ಎಂದರು.ಈಗಾಗಲೇ ತಾಲೂಕಿನಲ್ಲಿ ಕನ್ನಡ ಭವನಕ್ಕಾಗಿ ಜಮೀನು ಮಂಜೂರು ಮಾಡಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ೨೩ ಗುಂಟೆ ಜಮೀನು ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಉತ್ತಮವಾದ ಕನ್ನಡ ಭವನ ನಿರ್ಮಾಣ ಮಾಡಲು ಶ್ರಮಿಸುತ್ತೇನೆ. ಜೊತೆಗೆ ತಾಲೂಕಿನಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್ ಮಾತನಾಡಿ, ನಾನೂ ಮೂಲತಃ ವಿಜ್ಞಾನ, ಗಣಿತ ಶಿಕ್ಷಕನಾಗಿದ್ದರೂ, ನನ್ನನ್ನು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಅಭಾರಿಯಾಗಿದ್ದೇನೆ. ಗುಡಿಬಂಡೆ ಎಂಬ ಚಿಕ್ಕ ತಾಲೂಕು ಆಂಧ್ರದ ಗಡಿಭಾಗದಲ್ಲಿದ್ದರೂ ಕನ್ನಡ ಭಾಷೆ ಉನ್ನತ ಸ್ಥಾನದಲ್ಲಿದೆ. ಅನೇಕರು ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹೋಬಳಿ ಮಟ್ಟದಲ್ಲಿ ಆಯೋಜನೆ ಮಾಡುವಂತಾಗಬೇಕು. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಆಗ ಗುಡಿಬಂಡೆಯ ಹಿರಿಮೆ ಮತ್ತಷ್ಟು ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಗುಡಿಬಂಡೆ ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕಿದೆ. ಈ ಕೂಗು ಗುಡಿಬಂಡೆ ತಾಲೂಕಿನ ಸಮಸ್ತ ಜನರದ್ದಾಗಿದೆ. ಈ ಕಾರ್ಯಕ್ಕೆ ಶಾಸಕರು ಕೈ ಜೋಡಿಸಬೇಕಿದೆ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಗುಡಿಬಂಡೆಯಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಈಗಾಗಲೇ ಶಾಸಕರಿಗೆ ಮನವಿ ಮಾಡಿದ್ದು, ಅದರಂತೆ ಭವನ ನಿರ್ಮಾಣಕ್ಕೆ ೨೩ ಗುಂಟೆ ಜಮೀನು ಸಹ ಮಂಜೂರು ಮಾಡಿದ್ದಾರೆ. ಆದಷ್ಟು ಶೀಘ್ರವಾಗಿ ಕನ್ನಡ ಭವನ ನಿರ್ಮಾಣ ಮಾಡಲು ಅನುದಾನ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ಕಸಾಪ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಸ.ನ.ನಾಗೇಂದ್ರ, ಪ್ರೆಸ್ ಸುಬ್ಬರಾಯಪ್ಪ, ತಾಪಂ ಇಒ ನಾಗಮಣಿ ಸೇರಿ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗಡಿ ಭಾಗವಾದ ಯರಹಳ್ಳಿ ಗ್ರಾಮದ ವಿದ್ಯಾರ್ಥಿನಿ ಶ್ಯಾಮಲಾ ಸುಮಧುರವಾದ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದಳು.ಧ್ವಜಾರೋಹದ ನಂತರ ಸಮ್ಮೇಳನದ ಅಧ್ಯಕ್ಷರಾದ ಬಿ.ಅಮೀರ್ ಜಾನ್ ರವರ ಮನೆಯಿಂದ ತಾಯಿ ಭುವನೇಶ್ವರಿದೇವಿ ಮೆರವಣಿಗೆಯು ಪಟ್ಟಣದ ಮುಖ್ಯರಸ್ತೆಯಲ್ಲಿ ತಮಟೆ ವಾದ್ಯ, ನಾದಸ್ವರ, ವೀರಗಾಸೆ ಸೇರಿ ಇತರೆ ಕಲಾ ತಂಡಗಳೊಂದಿಗೆ ವಿವಿಧ ಶಾಲಾ ಕಾಲೇಜಿನ ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಸ್ಥಳೀಯ ಕನ್ನಡಪರ, ರೈತಪರ ಸಂಘಟನೆಗಳ ಪದಾಧಿಕಾರಿಗಳು ಸೇರಿ ಸರ್ಕಾರಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.
ವೇದಿಕೆ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದ್ದು, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ಸ.ನ.ನಾಗೇಂದ್ರರವರು ಸಮ್ಮೇಳನದ ಅಧ್ಯಕ್ಷರಾದ ಬಿ.ಅಮೀರ್ ಜಾನ್ ರವರಿಗೆ ಕನ್ನಡ ಧ್ವಜವನ್ನು ಹಸ್ತಾಂತರ ಮಾಡಿದರು.ಬಿಇಒ ಕೃಷ್ಣಪ್ಪ, ಸಿಪಿಐ ನಯಾಜ್ ಬೇಗ್, ಪಪಂ ಅಧ್ಯಕ್ಷ ವಿಕಾಸ್, ಕಸಾಪ ಜಿಲ್ಲಾಧ್ಯಕ್ಷರಾದ ಕೋಡಿರಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣ ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಕಸಾಪ ನಿಕಟ ಪೂರ್ವ ಅಧ್ಯಕ್ಷರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು - ವಿದ್ಯಾರ್ಥಿಗಳು ಸೇರಿದಂತೆ ನೂರಾರು ಕನ್ನಡಭಿಮಾನಿಗಳು ಹಾಜರಿದ್ದರು.