ಧಾರವಾಡ: ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಮೇ 29 ರಿಂದ ಜೂನ್ 12ರ ವರೆಗೆ 15 ದಿನಗಳ ಕಾಲ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆಯಲಿದೆ.
ಮೇ 29ರ ಗುರುವಾರ ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಂದಾಳತ್ವದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆ ಹಾಗೂ ವಿವಿಧ ರೈತ ಉತ್ಪಾದಕ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಕೃಷಿ ಸಖಿಯರು, ಕೃಷಿಯಲ್ಲಿ ಆದಾಯ ದ್ವಿಗುಣಗೊಂಡ ರೈತರು, ಶ್ರೇಷ್ಠ ಕೃಷಿಕರು, ಆವಿಷ್ಕಾರಿ ರೈತರು ಹಾಗೂ ಇತರ ಎಲ್ಲ ವರ್ಗಗಳ ರೈತರುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಕೃಷಿ ವಿಜ್ಞಾನಿಗಳ ಕಾರ್ಯಪಡೆ ತಂಡಗಳಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಕ್ರೀಯವಾಗಿ ಪಾಲ್ಗೊಂಡು ಜಿಲ್ಲೆಯ ರೈತರಿಗೆ ಸಮಗ್ರ ಕೃಷಿ ವಿಷಯಗಳ ಬಗ್ಗೆ ಮಾಹಿತಿ ನೀಡಿ ಸಮಾಲೋಚನೆ ನಡೆಸಲಿದ್ದಾರೆ.ಅಭಿಯಾನದಲ್ಲಿ ನೂತನ ತಾಂತ್ರಿಕತೆಗಳ ಮಾಹಿತಿ, ಪದ್ಧತಿ ಪ್ರಾತ್ಯಕ್ಷಿಕೆಗಳು, ಚರ್ಚೆ, ಕ್ಷೇತ್ರ ಭೇಟಿ, ಪ್ರಗತಿಪರ ರೈತರಿಂದ ಯಶೋಗಾಥೆಗಳು ಹಾಗೂ ಇತರ ಚರ್ಚಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರಿಗೆ ಸಂಪೂರ್ಣ ಮಾಹಿತಿ ನೀಡಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ 5-6 ವಿಷಯತಜ್ಞ ವಿಜ್ಞಾನಿಗಳನ್ನೊಳಗೊಂಡ ಎರಡು ತಂಡಗಳು ನಿರಂತರ 15 ದಿನಗಳ ವರೆಗೆ 100ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಅನ್ನದಾತರೊಂದಿಗೆ ಸಮಾಲೋಚನೆ ಮಾಡಲಿದ್ದಾರೆ. ಈ ತಂಡಗಳ ಭೇಟಿಯ ಮುಖಾಂತರ ಜಿಲ್ಲೆಯಲ್ಲಿಯ ಕೃಷಿ ಹಾಗೂ ಕೃಷಿಯೇತರ ಕಸಬುಗಳ ಸಮಸ್ಯೆಗಳನ್ನು ರೈತರಿಂದ ಸಂಗ್ರಹಿಸಿ, ಅಗತ್ಯ ಪರಿಹಾರಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಭವಿಷ್ಯದ ಸಂಶೋಧನಾ ಕ್ರಿಯಾ ಯೋಜನೆಯನ್ನು ರೂಪಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
700 ಜಿಲ್ಲೆಗಳಲ್ಲಿ ಅಭಿಯಾನ: ಪ್ರಸ್ತುತ ತಂತ್ರಜ್ಞಾನಗಳಾದ ಕೃಷಿಯಲ್ಲಿ ಡ್ರೋನ್‌ಗಳ ಬಳಕೆ, ನ್ಯಾನೋ ತಂತ್ರಜ್ಞಾನ, ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆ, ಬೀಜೋಪಚಾರ, ಅಧಿಕ ಇಳುವರಿಯ ತಳಿಗಳು, ವಾಣಿಜ್ಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ತಾಂತ್ರಿಕತೆಗಳನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವ ಮಹತ್ತರ ಕಾರ್ಯಕ್ರಮ ಇದು. ಈ ವಿಶೇಷ ಅಭಿಯಾನವು ಕೃಷಿ ಸಂಶೋಧನೆ ಮತ್ತು ರೈತ ಸಮುದಾಯದ ನಡುವಿನ ಅಂತರ ಕಡಿಮೆಗೊಳಿಸಿ, ದೇಶಾದ್ಯಂತ 700 ಜಿಲ್ಲೆಗಳಲ್ಲಿ ಸುಮಾರು 1.5 ಕೋಟಿ ರೈತರನ್ನು ತಲುಪುವ ಗುರಿ ಹೊಂದಿದೆ.