ಡಿ. 19ರಿಂದ ಡೆವಲಪರ್ಸ್‌ ಕಟ್ಟಡ ಸಾಮಗ್ರಿಗಳ ಬೃಹತ್ ಪ್ರದರ್ಶನ

KannadaprabhaNewsNetwork |  
Published : Sep 21, 2025, 02:01 AM IST
20ಎಚ್‌ಯುಬಿ31ಕ್ರೆಡಾಯಿ ಸರ್ವ ಸದಸ್ಯರ ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಅವಳಿನಗರದಲ್ಲಿ ಸರ್ವ ರೀತಿಯ ಅಭಿವೃದ್ಧಿ ಆಗುತ್ತಿರುವುದು ಕಣ್ಣಿಗೆ ಕಾಣುತ್ತಿದೆ. ವಲಸೆ ಹೆಚ್ಚಾದಂತೆ ಮನೆ ಮತ್ತು ವಾಣಿಜ್ಯ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಪ್ರದರ್ಶನವನ್ನು ಅದಕ್ಕೆ ಪೂರಕವಾಗಿ ಆಯೋಜಿಸಲಾಗಿದೆ.

ಹುಬ್ಬಳ್ಳಿ: ಕ್ರೆಡಾಯಿ (ಕಾನ್ಫೆಡರೇಶನ್‌ ಆಫ್ ರಿಯಲ್ ಎಸ್ಟೇಟ್ ಅಸೋಸಿಯೇಷನ್ ಆಫ್ ಇಂಡಿಯಾ) ಹು-ಧಾ ಶಾಖೆಯು ಪ್ರಥಮ ಬಾರಿಗೆ ನಗರದ ವಿಮಾನ ನಿಲ್ದಾಣ ರಸ್ತೆಯ ವಿಶಾಲ ಜಾಗೆಯಲ್ಲಿ ಡಿಸೆಂಬರ್ ೧೯ರಿಂದ ೨೧ರ ವರೆಗೆ 3ದಿನ "ರಿಕಾನ್ ೨೦೨೫ " ಹೆಸರಿನಡಿ ಉತ್ತರ ಕರ್ನಾಟಕದ ಡೆವಲಪರ್ಸ್ ಮತ್ತು ವಿನೂತನ ಕಟ್ಟಡ ಸಾಮಗ್ರಿಗಳ ಬೃಹತ್ ಪ್ರದರ್ಶನ ಆಯೋಜಿಸಿದೆ ಎಂದು ಅಧ್ಯಕ್ಷ ಗುರುರಾಜ ಅಣ್ಣಿಗೇರಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಅವಳಿ ನಗರದ ಕ್ರೆಡಾಯಿ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್ ಎದುರಿನ ಆರು ಎಕರೆ ಜಾಗೆಯಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದ್ದು, ಎರಡು ವಿಭಾಗಗಳನ್ನು ಮಾಡಲಾಗಿದೆ. ಒಂದರಲ್ಲಿ ಡೆವಲಪರ್ಸ್, ಬಿಲ್ಡರ್ಸ್ ಕಂಪನಿಗಳು ಸಾರ್ವಜನಿಕರಿಗೆ ತಮ್ಮ ವಿವಿಧ ಯೋಜನೆಗಳ ಮಾಹಿತಿ ನೀಡುವರು. ಎರಡನೇ ವಿಭಾಗದಲ್ಲಿ ಕಟ್ಟಡ ಸಾಮಗ್ರಿ ಹಾಗೂ ಒಳಾಂಗಣ ಅಲಂಕಾರ ಕುರಿತು ವಿಫುಲ ಮಾಹಿತಿ ಲಭ್ಯವಾಗಲಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲದೇ, ಬೆಂಗಳೂರು, ಮೈಸೂರು, ಮಂಗಳೂರು ಮೊದಲಾದೆಡೆಗಳಿಂದಲೂ ಉದ್ಯಮಿಗಳು ಸ್ಟಾಲ್ ಹಾಕಲಿದ್ದಾರೆ. ಯಾರಾದರೂ ಬೇರೆ ನಗರಗಳಲ್ಲಿ ನಿವೇಶನ ಕೊಳ್ಳುವುದಿದ್ದರೆ ಇಲ್ಲಿಯೇ ಬುಕ್ ಮಾಡಬಹುದು ಎಂದರು.

ಕ್ರೆಡಾಯಿ ಕೋಶಾಧಿಕಾರಿ ಬ್ರಿಯಾನ್ ಡಿಸೋಜಾ ಮಾತನಾಡಿ, ಅವಳಿನಗರದಲ್ಲಿ ಸರ್ವ ರೀತಿಯ ಅಭಿವೃದ್ಧಿ ಆಗುತ್ತಿರುವುದು ಕಣ್ಣಿಗೆ ಕಾಣುತ್ತಿದೆ. ವಲಸೆ ಹೆಚ್ಚಾದಂತೆ ಮನೆ ಮತ್ತು ವಾಣಿಜ್ಯ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಪ್ರದರ್ಶನವನ್ನು ಅದಕ್ಕೆ ಪೂರಕವಾಗಿ ಆಯೋಜಿಸಲಾಗಿದೆ. ಮುಂದಿನ ವರ್ಷ ಕ್ರೆಡಾಯಿ ಸದಸ್ಯರಿಗಾಗಿ ಚೀನಾ ದೇಶಕ್ಕೆ ಅಧ್ಯಯನ ಪ್ರವಾಸವನ್ನೂ ಏರ್ಪಡಿಸಲಾಗಿದೆ ಎಂದು ಹೇಳಿದರು.

ಕೋಟಿ ಸ್ಟೀಲ್ ಮಾರುಕಟ್ಟೆ ವಿಭಾಗದ ನಿರ್ದೇಶಕ ರಾಹುಲ್ ಕೋಟಿ ಮಾತನಾಡಿ, ನಮ್ಮ ಕಂಪನಿ ಉತ್ಪಾದಿಸಿ ಮಾರಾಟ ಮಾಡುವ ಪ್ರತಿ ಟನ್ ಸ್ಟೀಲ್‌ನಿಂದ ಬರುವ ಆದಾಯದಲ್ಲಿ ಒಂದು ಸಸಿ ನೆಡುವ ಹಾಗೂ ಅಗತ್ಯವಿದ್ದವರಿಗೆ ಒಂದು ಊಟ ನೀಡುವ ಯೋಜನೆ ಆರಂಭಿಸಿದ್ದೇವೆ. ಕ್ರೆಡಾಯಿ ಹಸಿರು ನಿಧಿ ಯೋಜನೆಗೆ ತಮ್ಮ ಕಂಪನಿ ಕೂಡ ಸಹಕರಿಸಲಿದ್ದು, ಮಹಾನಗರದಲ್ಲಿ ನೆಡುವ ಸಸಿಗಳ ಸಂಖ್ಯೆಯನ್ನು ೨೫ ಸಾವಿರದಿಂದ ೫೦ ಸಾವಿರಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಕಂಪನಿಯ ಉಪಾಧ್ಯಕ್ಷ ಬಳವಂತರಾವ್ ಮಾತನಾಡಿ, ತಮ್ಮ ಕಂಪನಿ ತೆಲಂಗಾಣದ ಮೇಡಕ್ ಜಿಲ್ಲೆ ಹಾಗೂ ಛತ್ತೀಸಗಡದ ರಾಯಪುರದಲ್ಲಿ ಎರಡು ಸ್ಟೀಲ್ ಪ್ಲಾಂಟ್ ಹೊಂದಿದ್ದು ಸದ್ಯಕ್ಕೆ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಗೆ ಉಕ್ಕು ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದೆ ಎಂದರು.

ಇದೇ ವೇಳೆ ಪ್ರದರ್ಶನದ ಮಾಹಿತಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಕ್ರೆಡಾಯಿ ಹುಧಾ ಶಾಖೆಯಿಂದ ಅವಳಿ ನಗರದಲ್ಲಿ ೨೫ ಸಾವಿರ ಸಸಿ ನೆಡುವ ಯೋಜನೆಗೆ ನಿಧಿ ಸಂಗ್ರಹಿಸುವ ಕಾರ್ಯಕ್ರಮವನ್ನೂ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ಅತಿ ವೇಗದಿಂದ ಬೆಳೆಯುತ್ತಿರುವ ಹು-ಧಾ ಅವಳಿ ನಗರದ ಜನತೆಗೆ ಸ್ವಂತ ಮನೆ ಕಟ್ಟಿಸುವ ಕನಸು ನನಸಾಗಲು ನೆರವಾಗುವಂತೆ ಇಂಥ ಪ್ರದರ್ಶನಗಳು ಅಗತ್ಯವಾಗಿವೆ. ಇದರಿಂದ ಮಹಾನಗರದ ಕುರಿತು ರಾಜ್ಯಾದ್ಯಂತ ಅರಿವು ಹೆಚ್ಚಾಗುವುದು ಅಲ್ಲದೇ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ನೆರವಾಗುವುದು. ಕ್ರೆಡಾಯಿ ಪ್ರಯತ್ನ ಶ್ಲಾಘನೀಯವಾದುದು ಎಂದು ಕ್ರೆಡಾಯಿ ಹು-ಧಾ ಮಹಾನಗರದ ಪೋಷಕರಾದ ಡಾ. ವಿ.ಎಸ್‌.ವಿ. ಪ್ರಸಾದ ಹೇಳಿದರು.

ಪ್ರದೀಪ್ ರಾಯ್ಕರ್, ಸಂಜಯ ಕೊಠಾರಿ, ಇಸ್ಮಾಯಿಲ್ ಸಂಶಿ, ಕಾಶೀನಾಥ ಚಟ್ನಿ, ಸಾಜಿದ್ ಫರಾಶ್, ಶಿವಣ್ಣ ಪಾಟೀಲ, ಸೂರಜ ಅಳವಂಡಿ, ಶ್ರೀಪಾದ ಶೇಜವಾಡಕರ, ಆಕಾಶ ಹಬೀಬ್, ಅಮೃತ ಮೆಹರವಾಡೆ ಇದ್ದರು.

ಕ್ರೆಡಯಿ ಸಹಕಾರ್ಯದರ್ಶಿ ಅರ್ಬಾಜ್ ಸಂಶಿ ನಿರೂಪಿಸಿದರು. ಕ್ರೆಡಾಯಿ ಕಾರ್ಯದರ್ಶಿ ಸತೀಶ ಮುನವಳ್ಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ