ಬಳ್ಳಾರಿ: ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ಕಾಲಾವಧಿಯಲ್ಲಿ ಯಾವ ಉದ್ಯಮಗಳು ಲಾಭ ಪಡೆಯುತ್ತಿದ್ದವೋ ಆ ಉದ್ಯಮಗಳಿಂದ ಸಿಎಸ್‌ಆರ್ ಅನುದಾನವನ್ನು ಶೈಕ್ಷಣಿಕ ಅಭಿವೃದ್ಧಿ, ಆರೋಗ್ಯ, ಕೌಶಲಾಭಿವೃದ್ಧಿಗೆ ಬಳಕೆ ಮಾಡುವಂತೆ ಕಾಯ್ದೆ ಜಾರಿಗೆ ತಂದರು. ಅದರಡಿ ಈಗಾಗಲೇ ಸಾಕಷ್ಟು ಅನುದಾನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.ಜಿಲ್ಲಾಸ್ಪತ್ರೆಯಲ್ಲಿ ಎನ್.ಎಂಡಿಸಿಯ ಸಿಎಸ್ ಆರ್ ಅನುದಾನದಲ್ಲಿ ₹12 ಕೋಟಿ ವೆಚ್ಚದ ಎಂಆರ್ಐ ಸ್ಕ್ಯಾನಿಂಗ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಜಿಲ್ಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಬಿಪಿಎಲ್ ಕಾರ್ಡ್ ದಾರರಿಗೆ ₹1150ಗಳಲ್ಲಿ ಸ್ಕ್ಯಾನಿಂಗ್ ಸೇವೆ ದೊರೆಯಲಿದೆ. ಈ ಕುರಿತು ಎಲ್ಲ ತಾಲೂಕು ಮಟ್ಟದಲ್ಲಿಯು ಸಹ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಹೇಳಿದರು.
ಜಿಲ್ಲಾಡಳಿತದ ಸಹಕಾರದೊಂದಿಗೆ ಸಂಸದರ ಇಚ್ಛಾಶಕ್ತಿಯಿಂದ ಅತ್ಯಾಧುನಿಕ ತಂತ್ರಜ್ಞಾನದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ಸಿಎಸ್‌ಆರ್ ಅನುದಾನದಡಿ ಎನ್‌ಎಂಡಿಸಿಯಿಂದ ನೀಡಲಾಗಿದೆ. ಮಾನವದ ದೇಹದೊಳಗೆ ಮೂಳೆ ಮತ್ತು ನರಗಳಿಗೆ ಸಂಬಂಧಿಸಿದಂತೆ ಸ್ಕ್ಯಾನ್ ಮಾಡಲು ಇದು ಅನುಕೂಲವಾಗಲಿದೆ. ಇದು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳಲಿದ್ದು, ಪ್ರತಿದಿನ ನಿಯಮಿತವಾಗಿ ಸ್ಕ್ಯಾನಿಂಗ್ ಮಾಡಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ ತಿಳಿಸಿದರು.ಇದೇ ವೇಳೆ ಗುಣಮಟ್ಟದ ಸ್ಕ್ಯಾನಿಂಗ್ ಕವರ್ ಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಎನ್‌ಎಂಡಿಸಿ ಯ ಜನರಲ್ ಮ್ಯಾನೇಜರ್ ಚಟರ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾ ಆಸ್ಪತ್ರೆಯ ಅಧಿಕಾರಿ-ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.ನಂತರ ನಗರದ ರಾಘವೇಂದ್ರ ಕಾಲೋನಿಯಲ್ಲಿ 2024-25ನೇ ಸಾಲಿನ ಸಂಸದರ 25 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ಬಳ್ಳಾರಿಯ ಆದರ್ಶ ಪಾರ್ಕ್ ನಲ್ಲಿ ಪೇವರ್ಸ್ ಅಳವಡಿಕೆ ಮತ್ತು ಪಿರಾಮಿಡ್ ಯೋಗಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.