ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗಡಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಮುಖಂಡರು ಅರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಶೀಗನಾಯಕ, ಹನುಮಂತು ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು ವಿಧಾನಸಭಾ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಕ್ಷೇತ್ರಗಳಿದ್ದು, ೦೫ ತಾಲೂಕುಗಳು ಇದ್ದು ಎಸ್.ಸಿ/ಎಸ್.ಟಿ, ಓಬಿಸಿ ಜನರೇ ಶೇ.೭೦ ರಷ್ಟು ಜನಸಮುದಾಯ ಕಡು ಬಡತನ, ಕೃಷಿ ಕೂಲಿ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದರು.೯೦ರ ದಶಕಗಳ ತನಕ ಶಾಸಕರಾಗಿ ಆಯ್ಕೆಯಾದ ಶಾಸಕರೆಲ್ಲರೂ ಈ ಜಿಲ್ಲೆಯಲ್ಲಿ ಒಳಗೊಳ್ಳುವ ಆಯಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು, ನಂತರ ಬಂದ ಶಾಸಕರು ಆಯ್ಕೆಯಾದ ಕ್ಷೇತ್ರಗಳಲ್ಲಿ ಅಷ್ಟೇನೂ ಅಭಿವೃದ್ಧಿಯ ಕಡೆಗೆ ಒತ್ತು ನೀಡಿಲ್ಲ ಅದರಲ್ಲೂ ಹನೂರು ವಿಧಾನಸಭಾ ಕ್ಷೇತ್ರ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಾನವ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನಾಗಲೀ, ಕ್ರಮಗಳನ್ನಾಗಲೀ ಕೈಗೊಂಡಿರುವುದಿಲ್ಲ, ವಿದ್ಯಾವಂತ ನಿರುದ್ಯೋಗಿ ಗಳಿಗೆ ಉದ್ಯೋಗ ನೀಡುವ ಯಾವುದೇ ರೀತಿಯ ಕಾರ್ಖಾನೆ / ಕೈಗಾರಿಕೆ ಘಟಕಗಳನ್ನು ಸ್ಥಾಪಿಸುವಲ್ಲಿ ಈ ಶಾಸಕರು ಯಾವುದೇ ರೀತಿಯ ಗಮನ ಹರಿಸದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.ಹನೂರು ವಿಧಾನಸಭಾ ಕ್ಷೇತ್ರವಂತೂ ಸಮಸ್ಯೆಗಳ ಆಗರವನ್ನೆ ಹೊದ್ದು ಮಲಗಿದೆ. ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ೯ ಡ್ಯಾಂಗಳಿದ್ದು ಇವುಗಳಿಗೆ ನದಿ ಮೂಲದ ನೀರನ್ನು ತುಂಬಿಸುವ ವ್ಯವಸ್ಥೆ ಆಗಿರುವುದಿಲ್ಲ ಎಂದು ಆರೋಪಿಸಿದರು.ಇಲ್ಲಿನ ಮಾಜಿ ಶಾಸಕ ಆರ್.ನರೇಂದ್ರರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿಗಾಗಿ ಕಲ್ಪಿಸಿರುವ ಯೋಜನೆಯನ್ನೇ ಕೆರೆ ತುಂಬಿಸುವ ಯೋಜನೆಯಾಗಿದೆ ಎಂದು ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ ಎಂದರು.ಅಕ್ರಮ-ಸಕ್ರಮ (ದರಖಾಸ್ತು) ಯೋಜನೆಯಡಿ ಫಾರಂ ನಂ-೫೦, ೫೩, ೫೭ ಇವುಗಳಲ್ಲಿ ಸರ್ಕಾರಿ ಜಮೀನನ್ನು ಸುಮಾರು ೪೦-೫೦ ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಎಸ್.ಸಿ/ಎಸ್‌ಟಿ ಜಾತಿ /ಪಂಗಡದ ಜನರು ಸಕ್ರಮಕ್ಕಾಗಿ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದರು. ಇತ್ತೀಚೆಗೆ ಆಯ್ಕೆಯಾದ ಶಾಸಕರ ಅವಧಿಯಲ್ಲಿ ಸಮಿತಿ ರಚನೆ ಆಗಿದ್ದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಯಾವ ಔಚಿತ್ಯಕ್ಕೆ ಫಾರಂ ನಂ. ೫೩ ಮತ್ತು ೫೭ ರ ಅರ್ಜಿಯನ್ನು ಆಹ್ವಾನ ಮಾಡಿದ್ದು ಎಂಬುದು ಪ್ರಶ್ನೆಯಾಗಿದೆ ಎಂದರು.ಹನೂರು ಕ್ಷೇತ್ರದಲ್ಲಿ ವನ್ಯಜೀವಿ ಅರಣ್ಯ ವ್ಯಾಪ್ತಿಗೆ ಬಹುತೇಕ ಎಲ್ಲಾ ಗ್ರಾಮಗಳು ಅರಣ್ಯ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡುತ್ತವೆ. ಕಾರಣ ಯಾವುದೇ ಕೈಗಾರಿಕಾ ಘಟಕವನ್ನು ಸ್ಥಾಪಿಸಲು ಆಗುತ್ತಿಲ್ಲ ನಿರುದ್ಯೋಗ ಸಮಸ್ಯೆ ನೀಗಿಸಲು ಏನೂ ಮಾಡಬೇಕೆಂಬುದೇ ತೋಚದಾಗಿದೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಾಗಿರವುದು ನಮ್ಮ ಕಣ್ಮುಂದೆ ಇದೆ ಎಂದು ಮಾಜಿ ಶಾಸಕರ ಹಿಂಬಾಲಕರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.ದಿ.ಸಂಸದ ಆರ್.ಧ್ರುವನಾರಾಯಣ್ ಪರಿಶ್ರಮದ ಫಲವಾಗಿ ನಿರ್ಮಾಣಗೊಂಡಿರುವ ವಸತಿ ನಿಲಯ, ವಿದ್ಯಾರ್ಥಿ ನಿಲಯವನ್ನು ತಮ್ಮ ಅಭಿವೃದ್ಧಿ ಕಾರ್ಯ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ,ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳ ರಸ್ತೆಗಳು ಹದಗೆಟ್ಟಿದೆ ಎಂದರು.ಸಮಸ್ಯೆಗಳನ್ನು ಸರಿಪಡಿಸಲು ನಿಗದಿತ ಸಮಯದೊಳಗೆ ಕ್ರಮ ವಹಿಸದಿದ್ದರೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯು ಹೋರಾಟದ ಮುಖಾಂತರ ಜನರೊಡಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶಾಗ್ಯ ಮಹೇಶ್, ಕೆ.ಸಿ. ಸಿದ್ದರಾಜು, ಮಂಜು, ಮಾದೇಶ್, ಸುಂದರ್ ಇದ್ದರು.