ಬ್ಯಾಡಗಿ: ಪ್ರತಿಯೊಬ್ಬ ವ್ಯಕ್ತಿಯ ಕೊನೆಯ ಸ್ಥಳ ರುದ್ರಭೂಮಿ. ಹೀಗಾಗಿ ಬ್ಯಾಡಗಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಹಂತ ಹಂತವಾಗಿ ಸ್ಮಶಾನದ ಜಾಗ ಅಭಿವೃದ್ಧಿಗೊಳಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಮೋಟೆಬೆನ್ನೂರಿನ ಹಿಂದುಳಿದ ಸಮಾಜದ ಸ್ಮಶಾನ ಜಾಗ ₹30 ಲಕ್ಷದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಸ್ಮಶಾನ ಜಾಗ ಬಹುದಿನದಿಂದ ಅಭಿವೃದ್ಧಿ ಕಾಣದೇ ಸಮಸ್ಯೆ ಸುಳಿಯಲ್ಲಿ ಸಿಲುಕಿತ್ತು. ಈ ಕುರಿತು ಸಮಾಜದ ಜನರೂ ಬಹುದಿನದ ಬೇಡಿಕೆ ಈಡೇರಿಸುವಂತೆ ಮನವಿ ಸಹ ಮಾಡಿದ್ದರು. ಗ್ರಾಮದ ಹೃದಯಭಾಗದಲ್ಲಿ ಸ್ಮಶಾನವಿರುವುದರಿಂದ ಸ್ವಚ್ಛವಾಗಿದ್ದಷ್ಟು ಉತ್ತಮ ಎಂಬ ವಿಚಾರದಿಂದ ₹30 ಲಕ್ಷ ಅನುದಾನದಲ್ಲಿ ಸ್ಮಶಾನಭೂಮಿ ಅಭಿವೃದ್ಧಿ ಕಾಮಗಾರಿ ಜರುಗಲಿದೆ ಎಂದರು.ಶವ ಸುಡುವ (ಬರ್ನಿಂಗ್ ಮಿಶನ್) ಯಂತ್ರ: ಗ್ರಾಮದ ಮಧ್ಯಭಾಗದಲ್ಲಿರುವ ಪರಿಶಿಷ್ಟ ಸಮುದಾಯದ ಸ್ಮಶಾನ ಭೂಮಿ ಹಾಳುಬಿದ್ದಿದ್ದು, ಶವಸಂಸ್ಕಾರ ವಿಧಿ-ವಿಧಾನ ಹೊರಗೆ ಕಾಣದಂತೆ ಎತ್ತರದ ಕಾಂಪೌಂಡ್ ಗೋಡೆ ನಿರ್ಮಾಣ, ಜನರಿಗೆ ನೆರಳು, ಹೈಮಾಸ್ಟ್ ವಿದ್ಯುತ್ ಕಂಬ ಸೇರಿದಂತೆ ಹಲವು ಕಾಮಗಾರಿಗಳು ಇದರಲ್ಲಿ ಸೇರಿವೆ. ಜತೆಗೆ ವಿದ್ಯುತ್ ಬಳಸಿ ವೈಜ್ಞಾನಿಕವಾಗಿ ಶವಸಂಸ್ಕಾರ ಮಾಡಲು ಬರ್ನಿಂಗ್ ಮಿಶನ್ ಅಳವಡಿಸುವುದಾಗಿ ತಿಳಿಸಿದರು.
ಜನಪರ ಆಡಳಿತ: ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ಸರ್ಕಾರ ಜನಪರ ಆಡಳಿತ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುತ್ತಿದೆ. ಅದರಲ್ಲೂ ಎಸ್‌ಸಿ-ಎಸ್‌ಟಿ ಸಮಾಜದ ಜನರ ಕಾಲನಿ ಅಭಿವೃದ್ಧಿ, ತಾಲೂಕಿನಲ್ಲಿ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲಾ ಗಿದೆ. ಮೊದಲ ಹಂತದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲನಿಗಳಲ್ಲಿ ಡಾಂಬರೀಕರಣ, ಚರಂಡಿ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಈ ಸಮಾಜಗಳಿಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆಗೊಳಿಸಿದೆ ಎಂದರು.ಗ್ರಾಪಂ ಅಧ್ಯಕ್ಷೆ ಪಾರ್ವತೆಮ್ಮ ನಾಯಕ, ಸದಸ್ಯ ನಾಗರಾಜ ಹಾವನೂರು, ನಿವೃತ್ತ ಎಂಜಿನಿಯರ್ ಸಿ.ಆರ್. ಬಳ್ಳಾರಿ, ಶಿವಪುತ್ರಪ್ಪ ಅಗಡಿ, ಮಾರುತಿ ಬ್ಯಾಟಪ್ಪನವರ, ಎಂ. ನಿಂಗಪ್ಪ, ಪ್ರೇಮಾ ಅಂಗಡಿ, ಮಾಲತೇಶ ಹಾವನೂರು, ಮುತ್ತಪ್ಪ ಶಿಗ್ಗಾಂವಿ ಇನ್ನಿತರರಿದ್ದರು.