ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯಾಲಯದಲ್ಲಿ ಶುಕ್ರವಾರ ಕ್ರೀಡಾಂಗಣದ ವೇದಿಕೆ ಮತ್ತು ಸಂಕಲ್ಪ ಲ್ಯಾಬ್ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಅಧಿಕಾರಿಗಳು ಅತ್ಯಂತ ತ್ವರಿತವಾಗಿ ವಿದ್ಯಾಲಯಕ್ಕೆ ಭೇಟಿ ನೀಡಿ ಯಾವ ಯಾವ ಕಾಮಗಾರಿಗಳು ಆಗಬೇಕಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡು ಅದಕ್ಕೆ ಆಗುವ ಖರ್ಚು- ವೆಚ್ಚದ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ವಿದ್ಯಾಲಯದ ಪ್ರಾಂಶುಪಾಲರು ನನಗೆ ಶಾಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳು, ಮೂಲ ಸೌಕರ್ಯಗಳ ಕೊರತೆ ಇತ್ಯಾದಿ ಅಂಶಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಇವೆಲ್ಲ ಯೋಜನೆಗಳನ್ನು ಕೈಗೊಳ್ಳಲು ಸುಮಾರು ₹10 ರಿಂದ ₹15 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುವುದು ಎಂದರು.ವಿದ್ಯಾಲಯಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಪಟ್ಟಿ ಕೊಡಿ. ಅದರ ಆಧಾರದ ಮೇಲೆ ಅಂದಾಜು ವೆಚ್ಚ ಮಾಡಿಸಿ ಎಷ್ಟು ಮೊತ್ತ ವೆಚ್ಚವಾಗುತ್ತದೆ ಅಷ್ಟೂ ಹಣವನ್ನು ಒದಗಿಸಲಾಗುವುದು. ಆದಷ್ಟು ಬೇಗ ಕಾಮಗಾರಿಗೆ ಪೂಜೆ ಸಲ್ಲಿಸಿ ಒಂದು ವರ್ಷದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಕಾಮಗಾರಿಗಳ ಉದ್ಘಾಟನೆಯ ದಿನದಂದು ಬಂದು ಮಧ್ಯಾಹ್ನ ಮಕ್ಕಳ ಜೊತೆ ಊಟ ಸೇವಿಸುವೆ ಎಂದು ಸಚಿವರು ಹೇಳಿದರು.
ನವೋದಯ ವಿದ್ಯಾಲಯದ ಮಕ್ಕಳು, ವಿದ್ಯಾರ್ಥಿನಿಯರು ಸಚಿವ ಕುಮಾರಸ್ವಾಮಿ ಅವರನ್ನು ಕಳಸ ಹೊತ್ತು ವಿಶೇಷವಾಗಿ ಬರಮಾಡಿಕೊಂಡರು. ಗಂಡು ಮಕ್ಕಳು ಬ್ಯಾಂಡ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಎನ್‌ಸಿಸಿ ಸಮವಸ್ತ್ರಗಳನ್ನು ಧರಿಸಿ ಅತ್ಯಂತ ಶಿಸ್ತು ಬದ್ಧವಾಗಿ ಹೆಜ್ಜೆ ಹಾಕಿದರು. ಇದೆಲ್ಲವನ್ನು ಗಮನಿಸಿದ ಸಚಿವರು ಭಾವೋದ್ವೇಗಕ್ಕೆ ಒಳಗಾದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಿ.ವಿ.ಪ್ರಕಾಶ್ ಸೇರಿ ಬೋಧಕ ವರ್ಗ ಸಿಬ್ಬಂದಿ ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.