ಕನ್ನಡಪ್ರಭ ವಾರ್ತೆ ಯಳಂದೂರು
ಹೆಚ್ಚು ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬೇಡದ ಅನೇಕ ತೋಟಗಾರಿಕಾ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು ರೈತರು ಇದನ್ನು ಬೆಳೆಯಲು ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಹೆಸರು ಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ಕೆ ಬೆಹರ ಕರೆ ನೀಡಿದರು. ತಾಲೂಕಿನ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ರೈತರಿಗೆ ಹಮ್ಮಿಕೊಂಡಿದ್ದ ಗಿರಿಜನ ಉಪಯೋಜನೆಯಡಿಯಲ್ಲಿ ಗೊಬ್ಬರ ಹಾಗೂ ಪೋಷಕಾಂಶ ವಿತರಣೆ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಗುಡ್ಡಗಾಡು ಪ್ರದೇಶಗಳಲ್ಲಿರುವ ರೈತರು ತಮ್ಮ ಜಮೀನಿನಲ್ಲಿ ಅನೇಕ ಬೆಳೆಗಳನ್ನು ಬೆಳೆಯಬಹುದು. ಬೆಟ್ಟದ ವಾತಾವರಣದಲ್ಲಿ ಬೆಣ್ಣೆಹಣ್ಣು (ಬಟರ್ ಫ್ರೂಟ್) ಉತ್ತಮ ಬೆಳೆಯಾಗಿದೆ. ಇದರಲ್ಲೂ ಅನೇಕ ತಳಿಗಳಿವೆ ಇಲ್ಲಿಗೆ ಒಗ್ಗುವ ತಳಿಗಳ ಬೀಜಗಳನ್ನು ನಮ್ಮ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.ರೈತರು ಈ ಬೆಳೆಗಳನ್ನು ಇಲ್ಲಿಂದಲೇ ಬೆಳೆದು ಮಾರಾಟ ಮಾಡುವ ಮೂಲಕ ಹೆಚ್ಚು ಲಾಭಗಳಿಸಬಹದು. ಅಲ್ಲದೆ, ಕಾಫಿ, ಮೆಣಸು ಸೇರಿದಂತೆ ಇತರೆ ಸಂಬಾರ ಪದಾರ್ಥಗಳನ್ನು ಬೆಳೆಯಲು ಅವಕಾಶವಿದೆ. ಇದಕ್ಕೆ ಬೇಕಾಗುವ ಮಾರುಕಟ್ಟೆಯನ್ನು ನಾವು ಸೃಷ್ಟಿಸಿಕೊಳ್ಳಬಹುದು ಇದಕ್ಕೂ ನುರಿತವರಿಂದ ನಾವು ತರಬೇತಿ ನೀಡಲು ಸಿದ್ಧರಿದ್ದೇವೆ ಎಂದು ಮಾಹಿತಿ ನೀಡಿದರು.ಸಂಸ್ಥೆಯ ಹೂವಿನ ಬೆಳೆಗಳ ಹಿರಿಯ ವಿಜ್ಞಾನಿ ಡಾ.ಸುಮಂಗಲ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಟೊಮೆಟೋ, ಬೀನ್ಸ್ ಸೇರಿದಂತೆ ವಿವಿಧ ತಳಿಗಳ ಸುಧಾರಿತ ಬಿತ್ತನೆ ಬೀಜಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇವು ಹೆಚ್ಚು ಔಷಧಿಗಳನ್ನು ಕೇಳುವುದಿಲ್ಲ. ಇವು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರಿಂದ ಬೆಳೆ ಬೆಳೆಯುವ ರೈತರಿಗೆ ಗೊಬ್ಬರ ಹಾಗೂ ಔಷಧಿಗಾಗಿ ಹೆಚ್ಚು ಖರ್ಚು ಬರುವುದಿಲ್ಲ. ಜೊತೆಗೆ ಇಳುವರಿಯೂ ಅಧಿಕವಾಗಿ ಬರುತ್ತದೆ. ಅಲ್ಲದೆ ಇದು ಹೆಚ್ಚು ಪೌಷ್ಠಿಕಾಂಶಗಳಿಂದ ಕೂಡಿದ ತರಕಾರಿಗಳಾಗಿದ್ದು ಉತ್ತಮ ಮಾರುಕಟ್ಟೆಯೂ ಲಭ್ಯವಾಗುತ್ತದೆ. ಹಾಗಾಗಿ ರೈತರು ಇದರ ಲಾಭ ಪಡೆದುಕೊಳ್ಳಬೇಕು.ಈ ಭಾಗದಲ್ಲಿ ಪುಷ್ಪ ಕೃಷಿಯನ್ನು ಹೆಚ್ಚು ಮಾಡುವ ಉದ್ದೇಶದಿಂದ ನಮ್ಮ ಸಂಸ್ಥೆ ಹೆಚ್ಚು ಶ್ರಮಿಸುತ್ತಿದೆ. ರೈತರು ಹೆಚ್ಚಾಗಿ ಇಲ್ಲಿ ಸುಗಂಧರಾಜ ಬೆಳೆಯುತ್ತಾರೆ. ಇದರೊಂದಿಗೆ ಗುಲಾಬಿ, ಸೇವಂತಿಗೆ, ಚೆಂಡು ಹೂವು ಸೇರಿದಂತೆ ಇತರೆ ಪುಷ್ಪಗಳ ಸುಧಾರಿತ ಹೊಸ ತಳಿಗಳು ಇದ್ದು, ಇದನ್ನು ಹೆಚ್ಚಾಗಿ ಬೆಳೆಯಬೇಕು. ಇದಕ್ಕೆ ಬೇಕಾದ ಮಾರುಕಟ್ಟೆಯನ್ನು ಮಾಡಲು ನಮ್ಮ ಸಂಸ್ಥೆಯಿಂದ ಸಹಾಯ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ರೈತರಿಗೆ ಸುಧಾರಿತ ಬಿತ್ತನೆ ಬೀಜಗಳು ಹಾಗೂ ಗೊಬ್ಬರವನ್ನು ವಿತರಣೆ ಮಾಡಲಾಯಿತು. ವಿಜಿಕೆಕೆಯ ಡಾ.ಸುದರ್ಶನ್ ಮಾತನಾಡಿದರು. ಡಾ.ಡಿ.ಕೆ.ಸಿಂಗ್ ಕಾರ್ಯಕ್ರಮದ ಸಂಯೋಜಕ ಪುಟ್ಟರಂಗೇಗೌಡ ವಿವೇಕಾನಂದ ಗಿರಿಜಯ ಕಲ್ಯಾಣ ಶಾಲೆಯ ಮುಖ್ಯಶಿಕ್ಷಕ ಸುಂದರೇಶ್ ರೈತರಾದ ಹೊಮ್ಮ ಮಹದೇವಸ್ವಾಮಿ, ಎಚ್.ಡಿ.ಕೋಟೆಯ ಗೋಪಾಲ, ಎನ್. ಮಲ್ಲು, ಮಹದೇವಸ್ವಾಮಿ, ರಾಜಶೇಖರ ಮೂರ್ತಿ ಸೇರಿದಂತೆ ಅನೇಕರು ಇದ್ದರು.