ಕಾಂಗ್ರೆಸ್ಸಿಂದ ಮಾತ್ರ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ

KannadaprabhaNewsNetwork |  
Published : Apr 24, 2025, 11:47 PM IST
24ಸಿಎಚ್ಎನ್56ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಹನೂರಿನಲ್ಲಿ ಮಲೆಮಹದೇಶ್ವರ ದರ್ಶನ ಪಡೆದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನಾವು ಪ್ರಾಧಿಕಾರಗಳನ್ನು ರಚನೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ. ಈ ಕೆಲಸಗಳನ್ನು ಹಿಂದಿನ ಬಿಜೆಪಿ, ಜೆಡಿಎಸ್ ಸರ್ಕಾರಗಳು ಏಕೆ ಮಾಡಲಿಲ್ಲ? ನಾವು ಸರ್ವ ಜನಾಂಗಕ್ಕೂ ಒಳಿತಾಗಲು ಬೇಡಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹೊಸದಾಗಿ ಸವದತ್ತಿ ಎಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಈ ಹಿಂದೆ ಮಲೆ‌ಮಹದೇಶ್ವರ, ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಮಾಡಿದ್ದೆವು. ಮಲೆಮಹದೇಶ್ವರ ಸನ್ನಿಧಾನದ ಇತಿಹಾಸ ತೆಗೆದುಕೊಂಡರೆ ಈ ಹಿಂದೆ ಹೇಗಿತ್ತು ಈಗ ಹೇಗಿದೆ ಎನ್ನುವುದಕ್ಕೆ ಸಾಕ್ಷಿ ಕಣ್ಣ ಮುಂದಿದೆ. ಜನರು ದೇವಸ್ಥಾನಕ್ಕೆ ಬಂದಾಗ ಪ್ರಾರ್ಥನೆ ಮಾಡಲು ಪ್ರಶಾಂತವಾದ, ಉತ್ತಮವಾದ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂಬುದು ನಮ್ಮ ಆಶಯ ಎಂದರು.

ಮಹದೇಶ್ವರನ ದರ್ಶನ ಮಾಡಿ ಪೂಜೆ ಸಲ್ಲಿಸಬೇಕು ಎಂದೇ ಬುಧವಾರ ರಾತ್ರಿಯೇ ಬಂದು ಇಲ್ಲಿ ವಾಸ್ತವ್ಯ ಹೂಡಿದ್ದೆ. ಮಲೆಮಹದೇಶ್ವರ ಸ್ವಾಮಿ ವಿಶೇಷವಾದ ದೇವರು. ಬಡವರು, ಮಧ್ಯಮ ವರ್ಗ ಹಾಗೂ ಎಲ್ಲಾ ವರ್ಗಗಳ ಜನರು ಆರಾಧಿಸುವ ದೇವರು. ಬುಡಕಟ್ಟು ಜನರು ಸಹ ಆರಾಧಿಸುವ ಪದ್ಧತಿಯಿದೆ ಎಂದರು.

ಚಾಮರಾಜನಗರಕ್ಕೆ ಇರುವ ನಿರೀಕ್ಷೆ:

ಸಂಪುಟ ಸಭೆಯಿಂದ ಚಾಮರಾಜನಗರಕ್ಕೆ ಇರುವ ನಿರೀಕ್ಷೆಗಳೇನು ಎಂದು ಕೇಳಿದಾಗ, ನಿರೀಕ್ಷೆಗಳನ್ನು ಈಡೇರಿಸಲೆಂದೇ ಇಡೀ ಸರ್ಕಾರ ಜಿಲ್ಲೆಗೆ ಬಂದಿದೆ. ನಮ್ಮ ಊರಿನಿಂದ ಈ ಹಿಂದೆ ಬೆಟ್ಟಕ್ಕೆ ಬರಬೇಕು ಎಂದರೆ 4-5 ಗಂಟೆ ಪ್ರಯಾಣವಾಗುತ್ತಿತ್ತು. ಈಗ ರಸ್ತೆ ಅಭಿವೃದ್ಧಿಯಾಗಿದೆ. ಪ್ರತಿವರ್ಷ ಲಕ್ಷಾಂತರ ಜನ ಕಾವೇರಿ ನದಿ ದಾಟಿಕೊಂಡು ಕ್ಷೇತ್ರಕ್ಕೆ ಬರುತ್ತಾರೆ. ಇದಕ್ಕೆ ಅನುಕೂಲವಾಗುವಂತೆ ಮೇಕೆದಾಟು ಆದ ನಂತರ ಮೇಲ್ಸೇತುವೆ ರಸ್ತೆ ನಿರ್ಮಾಣದ ಬಗ್ಗೆ ಯೋಚನೆ ಮಾಡಲಾಗುವುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಏನೇನು ಕೆಲಸ ಮಾಡಬೇಕು ಎಂದು ತೀರ್ಮಾನ ಮಾಡಲಾಗುವುದು. ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಆಚಾರ ವಿಚಾರಗಳನ್ನು ಜನರಿಗೆ ತಿಳಿಸಬೇಕು ಎನ್ನುವುದು ನಮ್ಮ ಆಲೋಚನೆ ಎಂದರು.ರಾಜುಗೌಡರ ಕನಸು ಈಡೇರಿಸುವೆ:

ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ದಿ.ರಾಜುಗೌಡರ ಕನಸಿನ ಕೂಸಾದ ಮೇಕೆದಾಟು ಯೋಜನೆ, ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಮೇಕೆದಾಟು ಯೋಜನೆಯ ಬಳಿಕ ರಸ್ತೆ ನಿರ್ಮಾಣ ಮಾಡುವ ಚಿಂತನೆ ಇದೆ. ಪ್ರತಿ ವರ್ಷ ಮಲೆಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಉತ್ತಮ ರಸ್ತೆ ಅಭಿವೃದ್ಧಿ ಮಾಡಲಾಗುವುದು, ರಾಜ್ಯದ ಜನತೆಯ ಹಿತ ಮತ್ತು ಸುರಕ್ಷತೆಯೇ ನಮ್ಮ ಧ್ಯೇಯ ಎಂದರು.ಸುತ್ತೂರು ಶಾಖಾ ಮಠಕ್ಕೆ ಭೇಟಿ:

ಮಲೆಮಹದೇಶ್ವರ ದರ್ಶನ ಪಡೆದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಲೆಮಹದೇಶ್ವರ ಬೆಟ್ಟದ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸಾಲೂರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...