ಸಮಾಜದ ಅಭಿವೃದ್ಧಿಗೆ ಎಲ್ಲರೂ ತೊಡಗಿಸಿಕೊಳ್ಳಿ: ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ

KannadaprabhaNewsNetwork |  
Published : May 11, 2025, 11:50 PM IST
ಫೋಟೊಪೈಲ್- ೧೧ಎಸ್ಡಿಪಿ೨- ಸಿದ್ದಾಪುರದಲ್ಲಿ ಜರುಗಿದ ಸಭೆಯಲ್ಲಿ ಡಾ|ಗಿರಿಧರ ಕಜೆ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದ ಸಂಘಟನೆ ಗಟ್ಟಿಯಾಗಿ, ಕ್ರಿಯಾಶೀಲವಾಗಿದ್ದರೆ ಉತ್ತಮ ಕಾರ್ಯ ಮಾಡಲು ಸಾಧ್ಯ.

ಸಿದ್ದಾಪುರ: ಸಮಾಜದ ಸಂಘಟನೆ ಗಟ್ಟಿಯಾಗಿ, ಕ್ರಿಯಾಶೀಲವಾಗಿದ್ದರೆ ಉತ್ತಮ ಕಾರ್ಯ ಮಾಡಲು ಸಾಧ್ಯ. ಸಂಘಟಕರು ಚೆನ್ನಾಗಿರಬೇಕಾದರೆ ನಿತ್ಯ ನಿರಂತರವಾಗಿ ಕಾರ್ಯಚಟುವಟಿಕೆ ನಡೆಸಲು ಸ್ವಂತ ಸ್ಥಳ ಅತ್ಯವಶ್ಯ. ಇಚ್ಚಾಶಕ್ತಿ ಇದ್ದರೆ ಇವೆಲ್ಲವೂ ಸಾಧ್ಯವಾಗುತ್ತದೆ ಎಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.

ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ತಾಲೂಕು ಹವ್ಯಕ ಮಹಾಸಭೆ ಹವ್ಯಕ ಸಭಾಭವನ ನಿರ್ಮಾಣದ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಮಾಜದ ಜೊತೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಭಾಭವನದ ನಿರ್ಮಾಣಕ್ಕೆ ನಮ್ಮಿಂದಾದ ಸಹಾಯ ಸಹಕಾರ ನೀಡಬೇಕು. ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಂಡವರನ್ನು ದೇವರು ಚೆನ್ನಾಗಿ ಇಡುತ್ತಾನೆ. ಎಲ್ಲ ಕಡೆ ಹವ್ಯಕ ಸಭಾಭವನ ನಿರ್ಮಾಣವಾಗಬೇಕು. ಆ ಮೂಲಕ ನಮ್ಮ ಸಮಾಜದ ಸಂಘಟನೆ ಆಗಬೇಕು. ನಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಹವ್ಯಕರು ಲೋಕಕಲ್ಯಾಣಾರ್ಥವಾಗಿಯೇ ಇದ್ದವರು. ನಾವೆಲ್ಲರೂ ಒಟ್ಟಾಗಬೇಕು. ಹವ್ಯಕರಲ್ಲಿ ಶ್ರೇಷ್ಠತೆ ಇದೆ. ನಮ್ಮ ಸಮುದಾಯದ ಬಗ್ಗೆ ಎಲ್ಲ ಸಮಾಜದವರಿಗೆ ವಿಶ್ವಾಸ ಇರುವಂತೆಯೇ ನಮಗೂ ಎಲ್ಲ ಸಮಾಜದವರ ಮೇಲೆ ವಿಶ್ವಾಸ ಇದೆ ಎಂದರು.

ಸಿದ್ದಾಪುರದಲ್ಲಿ ನಿರ್ಮಾಣವಾಗಲಿರುವ ಹವ್ಯಕ ಸಭಾಭವನಕ್ಕೆ ಹವ್ಯಕ ಮಹಾಸಭಾದಿಂದ ₹2.21 ಲಕ್ಷ ಈಗಾಗಲೇ ನೀಡಲಾಗಿದೆ. ಕಟ್ಟಡ ನಿರ್ಮಾಣದಲ್ಲಿ ಹವ್ಯಕರೆಲ್ಲರೂ ಮುಂದಾಗಬೇಕು. ಹವ್ಯಕರನ್ನು ಅಪಹಾಸ್ಯ ಮಾಡುತ್ತಿರುವುದಕ್ಕೆ ತಲೆಕೆಡಿಸಿಕೊಳ್ಳಬಾರದು. ನಾವು ನಮ್ಮ ಕೆಲಸ ಮಾಡುತ್ತಾ ಹೋಗಬೇಕು. ಹಿಂದೆ ಹವ್ಯಕರು ಗಟ್ಟಿಯಾಗಿದ್ದರು. ಈಗಲೂ ಗಟ್ಟಿ ಇದ್ದಾರೆ. ಹವ್ಯಕರ ಶಕ್ತಿ ಇಡೀ ಜಗತ್ತಿಗೆ ತಿಳಿದಿದೆ. ಆನೆ ಹಾಗೆ ನಮ್ಮ ನಡೆ ಇರಬೇಕು. ಮುಂದಿನ ಪೀಳಿಗೆ ಗಟ್ಟಿಯಾಗಬೇಕಾದರೆ ಸಭಾಭವನ ಅತ್ಯವಶ್ಯ ಎಂದರು.

ಹವ್ಯಕ ಮಹಾಸಭೆ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಪ್ರಾಸ್ತಾವಿಕ ಮಾತನಾಡಿ, ತಾಲೂಕಿನಲ್ಲಿ ಹವ್ಯಕರಿಗೆ ಮೂಲಭೂತ ಸೌಕರ್ಯದ ಕೊರತೆ ಇದೆ. ಪಟ್ಟಣದ ಶಂಕರಮಠ, ಭಾನ್ಕುಳಿಮಠ ಹೊರತು ಪಡಿಸಿ ಸಭೆ ಸಮಾರಂಭಗಳನ್ನು ನಡೆಸಲು ವ್ಯವಸ್ಥಿತವಾದ ಸಭಾಭವನ ಇಲ್ಲ. ಭವಿಷ್ಯದ ಹಿತದೃಷ್ಟಿಯಿಂದ ಪಟ್ಟಣದಲ್ಲಿ ಒಂದು ವ್ಯವಸ್ಥಿತವಾದ ಸಭಾಭವನ ನಿರ್ಮಾಣವಾಗಬೇಕು. ಹವ್ಯಕ ಸಮಾಜ ಎಲ್ಲ ಜನರೊಡನೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದು, ನಿರ್ಮಾಣವಾಗುವ ಸಭಾಭವನ ಕೇವಲ ಹವ್ಯಕ ಸಮಾಜಕ್ಕೆ ಮಾತ್ರವಲ್ಲದೇ ಎಲ್ಲ ಸಮಾಜದವರಿಗೂ ಅನುಕೂಲ ಆಗಲಿ ಎಂಬ ಅಪೇಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಶಿರಸಿ ರಸ್ತೆಯ ಕೋಲಸಿರ್ಸಿ ಕ್ರಾಸ್‌ನಲ್ಲಿ ೧೪ ಗುಂಟೆ ಜಾಗ ನೋಡಲಾಗಿದೆ. ಇನ್ನು ಆರು ಗುಂಟೆಯಷ್ಟು ಜಾಗದ ಅವಶ್ಯಕತೆ ಇದೆ. ಈ ಕುರಿತು ಮಾತುಕತೆ ನಡೆಸಲಾಗುತ್ತಿದೆ. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯವಿದೆ. ಸಭಾಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹೧೦ ಲಕ್ಷ ದೇಣಿಗೆ ನೀಡಲು ತೀರ್ಮಾನಿಸಿದ್ದೇನೆ ಎಂದರು.

ರವಿ ಹೆಗಡೆ ಹೂವಿನಮನೆ ಮಾತನಾಡಿ, ಸಮಾಜದಲ್ಲಿ ಹವ್ಯಕ ಸಮುದಾಯ ಎದ್ದು ನಿಲ್ಲುವ ಅಗತ್ಯವಿದೆ. ಹವ್ಯಕರು ಕೇವಲ ಮಾತಿನಲ್ಲಿ ಅಲ್ಲ, ಕೃತಿಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ತೋರಿಸಬೇಕಾಗಿದೆ ಎಂದು ಹೇಳಿ ಸಭಾಭವನಕ್ಕೆ ₹೧೦ ಲಕ್ಷ ನೀಡುವುದಾಗಿ ತಿಳಿಸಿದರು.

ಉದ್ಯಮಿ ಪ್ರಕಾಶ ಹೆಗಡೆ ಮಾತನಾಡಿ, ತಾಲೂಕಿನ ಅಡಕೆ ಬೆಳೆಗಾರರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂದಾಯವಾಗುತ್ತಿದೆ. ಆದರೆ ಹವ್ಯಕರಿಗೆ ಸರ್ಕಾರದಿಂದ ಸರಿಯಾಗಿ ಪರಿಹಾರ ಹಾಗೂ ಅಗತ್ಯ ಸಹಾಯ ಸಿಗುತ್ತಿಲ್ಲ. ಸಭಾಭವನ ನಿರ್ಮಾಣಕ್ಕೆ ಸಹಾಯ ನೀಡುವಂತೆ ಸರ್ಕಾರವನ್ನು ಆಗ್ರಹಿಸಬೇಕು ಎಂದು ಹೇಳಿ ಸಭಾಭವನದ ನಿರ್ಮಾಣಕ್ಕೆ ₹1,11,115 ನೀಡುವುದಾಗಿ ತಿಳಿಸಿದರು.

ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ, ಖಜಾಂಚಿ ಕೃಷ್ಣಮೂರ್ತಿ ಭಟ್ಟ ಸಾರಂಗ, ಪ್ರಮುಖರಾದ ಕೆ.ಎನ್ . ಶ್ರೀಧರ, ಅಶೋಕ ಹೆಗಡೆ, ಎ.ಪಿ. ಭಟ್ಟ ಮುತ್ತಿಗೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಎಂ.ಜಿ. ರಾಮಚಂದ್ರ, ಪತ್ರಕರ್ತ ನಾಗರಾಜ ಮತ್ತಿಗಾರ ಇದ್ದರು. ಜಿ.ಕೆ. ಭಟ್ಟ ಕಶಿಗೆ, ಎನ್.ವಿ. ಹೆಗಡೆ ಮುತ್ತಿಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಜಿ.ಜಿ. ಹೆಗಡೆ ಬಾಳಗೋಡ, ಗಣೇಶ ಭಟ್ಟ ಕಾಜಿನಮನೆ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ